ಮೈಸೂರು

ಕಾಂಗ್ರೆಸ್ ಭವನದಲ್ಲಿ ದಿ.ಡಿ.ದೇವರಾಜ ಅರಸ್ ಪುಣ್ಯಸ್ಮರಣೆ ಆಚರಣೆ : ಶೋಷಿತರು ಬಡವರ ಧ್ವನಿಯಾಗಿದ್ದವರು ಡಿ ದೇವರಾಜ ಅರಸು ;ಎಂ ಕೆ ಸೋಮಶೇಖರ್ ಬಣ್ಣನೆ

ಮೈಸೂರು,ಜೂ.6:- ಮೈಸೂರು ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸ್ ಅವರ ಪುಣ್ಯಸ್ಮರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸುವ ಮೂಲಕ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ  ಎಂ ಕೆ ಸೋಮಶೇಖರ್ ಬಡತನ ಮತ್ತು ಶೋಷಣೆಯನ್ನು ತೊಲಗಿಸಲು ಹೋರಾಡಿದ ದಿವಂಗತ ಡಿ ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮ ಪುಣ್ಯ. ಹಲವಾರು ವರ್ಷಗಳಿಂದ ಸಿರಿವಂತರ ಮನೆಯಾಳಾಗಿ ಜೀತದಾಳುಗಳಾಗಿ ದುಡಿಯುತ್ತಿದ್ದ ಪದ್ಧತಿಗೆ ಇತಿಶ್ರೀ ಹಾಡಿ ಜೀತಮುಕ್ತ ಪದ್ಧತಿಯನ್ನು ನಾಡಿಗೆ ನೀಡಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ. ಭೂ ನ್ಯಾಯಮಂಡಳಿಗಳನ್ನು ಸ್ಥಾಪಿಸಿ  ಉಳುವವನಿಗೆ ಭೂಮಿ ಕಾಯ್ದೆಯನ್ನು ಜಾರಿಗೆ ತಂದು ಇಡೀ ದೇಶದಲ್ಲೇ ಯಶಸ್ವಿಯಾಗಿ ಉಳುವವನಿಗೆ,ದುಡಿಯುವ ವರ್ಗಕ್ಕೆ ಭೂಮಿಯ ಹಕ್ಕನ್ನು ಕೊಡಿಸಿದ ಧೀಮಂತ ನಾಯಕ ಅರಸುರವರು ಎಂದು ಸ್ಮರಿಸಿದರು.

ವೃದ್ಧರಿಗೆ,ವಿಧವೆಯರಿಗೆ ಮಾಸಿಕ ವೇತನವನ್ನು  ಜಾರಿಗೊಳಿಸಿ ಅವರ ಬದುಕಿಗೂ ಆಸರೆಯಾದರು.ನಿರುದ್ಯೋಗಿ ಪದವೀಧರರನ್ನು ಗುರುತಿಸಿ ಸರ್ಕಾರದ ವತಿಯಿಂದಲೇ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ರೂಪಿಸಿ ನಿರುದ್ಯೋಗಿಗಳಿಗೂ ನೆರವಾಗಿದ್ದರು. ದೊಡ್ಡ ದೊಡ್ಡ ಸಮಾಜಗಳ ನಡುವೆ ಬೆಳಕಿಗೆ ಬರದೆ ಸಾಮಾಜಿಕವಾಗಿ ಹಿಂದುಳಿದ ಜಾತಿ ಜನಾಂಗದ ವ್ಯಕ್ತಿಗಳನ್ನು ಗುರುತಿಸಿ ಶಾಸಕ,ಸಂಸದ,ಮಂತ್ರಿಗಳಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿ ಸಣ್ಣ ಸಣ್ಣ ಜಾತಿಗಳಿಗೂ ಶಕ್ತಿ ನೀಡಿದರು ಎಂದರು.

ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್ ಮಾತನಾಡಿ ಶೋಷಣೆ ಮತ್ತು ಬಡತನ ದೇವರಾಜ ಅರಸುರವರ ಕಣ್ಣುಗಳಾಗಿದ್ದವು ಆದ್ದರಿಂದಲೇ ಶೋಷಿತರು ಬಡವರ ಬಗ್ಗೆ ಕಾಳಜಿ ವಹಿಸಿ ಆರ್ಥಿಕ,ಸಾಮಾಜಿಕ,ಶೈಕ್ಷಣಿಕ ,ಜಾತಿ ಸಮುಕ್ಷೆಗಳನ್ನು ಮಾಡಿಸುವ ಸದುದ್ದೇಶದಿಂದ ಹಾವನೂರರ ನೇತೃತ್ವದಲ್ಲಿ  ಹಿಂದುಳಿದ ವರ್ಗಗಳ ಆಯೋಗ ರಚಿಸಿ ಸಮಿತಿಯ ಅನ್ವಯ ಮೀಸಲಾತಿ  ನೀಡಿ ಹಿಂದುಳಿದ ಜನರಿಗೆ ದನಿಯಾಗಿದ್ದರು ಎಂದು ತಿಳಿಸಿದರು. ಡಾ.ಪುಷ್ಪಾ ಅಮರ್ ನಾಥ್ ಮಾತನಾಡಿ ಡಿ.ದೇವರಾಜ ಅರಸರ ಬಗ್ಗೆ ನಾವೆಷ್ಟೂ ಮಾತನಾಡಿದರೂ ಅದು ಕಡಿಮೆಯೇ ಆಗುತ್ತದೆ. ಅವರ ಹೋರಾಟ,ಸಾಧನೆಗಳೂ ಇಂದಿನ ರಾಜಕರಣಿಗಳಿಗೆ ಸ್ಪೂರ್ತಿಯಾಗಬೇಕು. ನಾನು ಹುಣಸೂರಿನ ಸೊಸೆಯಾಗಿ ಅರಸುರವರ ಮನೆ ಮಗಳು ಎಂದು ಹೇಳಿ ಕೊಳ್ಳಲು ಹೆಮ್ಮೆಯಾಗುತ್ತದೆ. ಅವರ ನೆನಪಿಗಾಗಿ ನಾನು ಜಿ.ಪ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಡಿ ದೇವರಾಜ ಅರಸು ಅವರ ಹೆಸರಿನಲ್ಲಿ ಮಿನಿ ಸಭಾಂಗಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್, ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷರಾದ ಹೆಚ್.ಎ.ವೆಂಕಟೇಶ್ ,ಕೆಪಿಸಿಸಿ ಸದಸ್ಯೆ ವೀಣಾ,ಬ್ಲಾಕ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್ ,ಶ್ರೀಧರ್,ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್ , ಐಟಿ ಸೆಲ್ ಅಧ್ಯಕ್ಷರಾದ  ನಿರಾಲ್ ಶಾ,ಖಾರ್ಯದರ್ಶಿ ಡೈರಿ ವೆಂಕಟೇಶ್,ವಿಶ್ವ,ಗುಣಶೇಖರ್ ,ಲೋಕೇಶ್ ಮಾದಪುರ,ಪೈಲ್ವಾನ್ ಆರ್ ಕೆ ರವಿ,ಚಂದ್ರು ವಿಶ್ವಕರ್ಮ,ವಕೀಲರಾದ ತ್ಯಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: