ದೇಶಪ್ರಮುಖ ಸುದ್ದಿ

ಸಚಿವ ಪಿಯೂಷ್ ಗೋಯಲ್ ತಾಯಿ ಚಂದ್ರಕಾಂತ ಗೋಯಲ್ ನಿಧನ

ಮುಂಬೈ,ಜೂ.6- ಬಿಜೆಪಿ ಹಿರಿಯ ನಾಯಕಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಾಯಿ ಚಂದ್ರಕಾಂತ ಗೋಯಲ್ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದಾಗಿ ಚಂದ್ರಕಾಂತ ಗೋಯಲ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಸಚಿವ ಗೋಯಲ್‌ ಟ್ವೀಟ್‌ ಮಾಡಿದ್ದು, ನನ್ನ ತಾಯಿಯು ತನ್ನ ಸಂಪೂರ್ಣ ಜೀವನವನ್ನು ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅಲ್ಲದೇ ಅವರ ಕಾರ್ಯವೈಖರಿಯಿಂದ ಬೇರೆಯವರಿಗೂ ಜನರ ಸೇವೆ ಮಾಡುವಂತೆ ಪ್ರೇರೇಪಿಸಿದ್ದರು ಎಂದಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ಚಂದ್ರಕಾಂತ ಗೋಯಲ್ ಅವರು ಮೊದಲ ಬಾರಿಗೆ ಮುಂಬೈ ಪಾಲಿಕೆಯ ಕಾರ್ಪೋರೇಟರ್‌ ಆಗಿ ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಸೇರಿದ್ದ ಅವರು, ಮುಂಬೈನ ಮಾತುಂಗ ವಿಧಾನಸಭೆಯಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಶಾಸಕಿಯಾದ ಸಂದರ್ಭದಲ್ಲಿ ಹಲವು ಜನಪರ ಕಾರ್ಯಗಳನ್ನ ಮಾಡುವ ಮೂಲಕ ಪ್ರಸಿದ್ದಿ ಪಡೆದಿದ್ದರು.

ತಾಯಿ ರಾಜಕೀಯದಲ್ಲಿ ಮೂಡಿಸಿದ್ದ ಸಂಚಲನ ಹಾಗೂ ಅವರ ಸರಳತೆ ತನಗೆ ರಾಜಕೀಯ ಸೇರವಂತೆ ಮಾಡಿತ್ತು. ತಾಯಿಯೇ ತನಗೆ ಸ್ಫೂರ್ತಿ ಎಂದು ಅನೇಕ ಬಾರಿ ಪಿಯೂಷ್‌ ಗೋಯಲ್‌ ಕಾರ್ಯಕ್ರಮಗಳಲ್ಲಿ ಹೇಳಿದ್ದರು. ಇನ್ನು ಚಂದ್ರಕಾಂತ ಗೋಯಲ್ ಅವರ ಪತಿ, ದಿವಂಗತ ಪ್ರಕಾಶ್‌ ಗೋಯಲ್‌ ಕೂಡ ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿದ್ದರು.

ಅಲ್ಲದೇ ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಇದೀಗ ಪಿಯೂಷ್‌ ಗೋಯಲ್‌ ಕೂಡ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಎರಡನೇ ಬಾರಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಉತ್ತಮ ಕೆಲಸದ ಮೂಲಕ ಮನೆಮಾತಾಗಿದ್ದಾರೆ. (ಎಂ.ಎನ್)

 

Leave a Reply

comments

Related Articles

error: