ಮೈಸೂರು

ಕನ್ನಡವನ್ನು ಹೃದಯ ಭಾಷೆಯಾಗಿ ಜೀವಂತ ವಿರಿಸಿಕೊಂಡವರು ಡಾ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ : ಡಾ. ವೈ ಡಿ ರಾಜಣ್ಣ ಬಣ್ಣನೆ

ಡಾ ಮಾಸ್ತಿ ವೆಂಕಟೇಶ್ ಅಯ್ಯಂಗಾರ್  ಅವರ 129ನೇ ಜಯಂತಿಯ ಅಂಗವಾಗಿ ‘ಕನ್ನಡದ ಆಸ್ತಿ ಸಾಹಿತಿ  ಮಾಸ್ತಿ’  ಕಾರ್ಯಕ್ರಮ

ಮೈಸೂರು,ಜೂ.6:- ಮಾಸ್ತಿ ಕನ್ನಡದ ಆಸ್ತಿ ಎಂದೇ ಪ್ರಖ್ಯಾತಿ ಪಡೆದಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ ಮಾಸ್ತಿ ವೆಂಕಟೇಶ್ ಅಯ್ಯಂಗಾರ್  ಅವರ 129ನೇ ಜಯಂತಿಯ ಅಂಗವಾಗಿ ‘ಕನ್ನಡದ ಆಸ್ತಿ ಸಾಹಿತಿ  ಮಾಸ್ತಿ’  ಎಂಬ ಕಾರ್ಯಕ್ರಮವನ್ನು ಇಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಆಚರಿಸಲಾಯಿತು. ಪುಷ್ಪಾರ್ಚನೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಡಾ. ವೈ ಡಿ ರಾಜಣ್ಣ   ಕನ್ನಡದ ಸಣ್ಣ ಕತೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡವನ್ನು ಹೃದಯ ಭಾಷೆಯಾಗಿ ಜೀವಂತ ವಿರಿಸಿಕೊಂಡವರು. ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದು ಕೇವಲ ಸಾಹಿತ್ಯ ಕೃಷಿ ಯಿಂದಲ್ಲ. ಕನ್ನಡದ ಮನಸ್ಸುಗಳನ್ನು, ಲೇಖಕರನ್ನು, ಕವಿಗಳನ್ನು  ಘೋಷಿಸಿ ಕನ್ನಡದ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿದ ಕಾರಣದಿಂದ.  ಮಾಸ್ತಿಯವರು ರಾಜಸೇವಾ ಪುಸ್ತಕ ಎಂಬ ಬಿರುದಿಗೂ ಭಾಜನರಾಗಿದ್ದು, ಸರ್ಕಾರದ ಕಾನೂನು ಕಟ್ಟಳೆಗಳು ಜನಸಾಮಾನ್ಯರಿಗೂ ಅರ್ಥವಾಗುವಂತಾಗಬೇಕು ಎಂದು ಪ್ರತಿಪಾದಿಸಿ ಹಲವು ಇಂಗ್ಲಿಷ್ ,ಹಾಗೂ ಫ್ರಾನ್ಸ್   ಭಾಷೆಯ ನುಡಿಗಳನ್ನು ಕಂದಾಯ ಇಲಾಖೆಯಲ್ಲಿದ್ದಾಗ ಕನ್ನಡಕ್ಕೆ ಭಾಷಾಂತರ ಮಾಡಿಸಿ ಅನುಷ್ಠಾನಕ್ಕೆ ತಂದರು.  ಆ ಮೂಲಕ ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಅಂದೇ ಶ್ರಮಿಸಿ ನಿಜವಾದ ಅರ್ಥದಲ್ಲಿ ಕನ್ನಡದ ಆಸ್ತಿಯಾದರು ಎಂದರು.

ಮಾಸ್ತಿಯವರು ಸಣ್ಣ ಕಥೆಗಳ ಜೊತೆಗೆ ನಾಟಕ, ಆತ್ಮಕಥನ, ಭಾಷಾಂತರ, ಖಂಡ ಕಾವ್ಯ ,ಕವನ ಸಂಕಲನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅವರ  ವಿದ್ವತ್ ಮತ್ತು ವಿಚಾರ ಲಹರಿಯ ಸಾಹಿತ್ಯ ಶೈಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್  ಮಾತನಾಡಿ ಮಾಸ್ತಿ ಅವರ ಹುಟ್ಟಿದ ದಿನದಿಂದ ಸಂಸ್ಮರಣೆ ದಿನವೂ ಕೂಡ ಆಗಿದೆ. ಮಾಸ್ತಿಯವರ ಮಾತೃಭಾಷೆ ತಮಿಳು ಆದರೂ ಸಹ ಅವರ ಹೃದಯ ಭಾಷೆ ಕನ್ನಡವಾಗಿತ್ತು. ಅದಕ್ಕಾಗಿಯೇ ಅವರ ಸೇವೆ ಇವತ್ತಿಗೂ ಮಾದರಿಯಾಗಿದೆ. ಮೂಲತಃ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ಅವರು ಕನ್ನಡ ಭಾಷೆಯನ್ನು ಪ್ರೀತಿಸುತ್ತ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯ ಪದ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಆಗ್ರಹಿಸಿದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಸಣ್ಣ ಕಥೆಗಳ  ಹರಿಕಾರರಾಗಿ ಹಳ್ಳಿಯ ಬದುಕು ರೈತನ ಉಸಿರು ಪರಿಸರ ಹಾಗೂ ಜನರ ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಹೆಚ್ಚಾಗಿ ಬಿಂಬಿಸುತ್ತಿದ್ದರು. ಎಚ್ ಡಿ ಕೋಟೆ ತಾಲೂಕಿನ ಗುಡ್ಡ ಪ್ರದೇಶ ಪರಿಚಯಿಸುವ ಕಾಕನಕೋಟೆ ಜನಪ್ರಿಯ ಚಲನಚಿತ್ರ ಅವರು ರಚಿಸಿದ ಕಥಾಭಾಗವಾಗಿದೆ. ಇವತ್ತಿಗೂ ಆದಿವಾಸಿಗಳು ಮುಖ್ಯವಾಹಿನಿಗೆ ಬಂದು ವಿದ್ಯಾವಂತರಾಗಲು ಇವರು ರಚಿಸಿದ ಕಥೆಗಳು  ಪ್ರೇರಣೆಯಾಗಿದೆ ಎಂದರು.

ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿ ಕೊಳ್ಳುವವರನ್ನು ಸಮಾಜ ಯಾವಾಗಲೂ ನೆನೆಯುತ್ತದೆ. ಅಂತಹ ವ್ಯಕ್ತಿತ್ವ ಹೊಂದಿದ್ದ ಮಾಸ್ತಿಯವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ ಅಂತಹ ವ್ಯಕ್ತಿಗಳನ್ನು ಸ್ಮರಿಸುವ ಕೆಲಸ ಮುಂದುವರಿಯಬೇಕು. ಆ ಮೂಲಕ ಅವರ ಬದುಕು, ಸಾಧನೆ, ಶ್ರಮ ಹಾಗೂ ಆದರ್ಶಗಳನ್ನು ಸ್ಮರಿಸಿ ಮೈಗೂಡಿಸಿಕೊಳ್ಳುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾ ವಿ ರಾಮಪ್ರಸಾದ್,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ,ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಅಜಯ್ ಶಾಸ್ತ್ರಿ, ಸುಚೀಂದ್ರ, ಚಕ್ರಪಾಣಿ, ಶ್ರೀನಿವಾಸ್ ರಾಕೇಶ್ ,ಗಣೇಶ್ ಪ್ರಸಾದ್,ಜಯಸಿಂಹ ಶ್ರೀಧರ್ ,ಶ್ರೀಕಾಂತ್ ಕಶ್ಯಪ್ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: