ದೇಶಪ್ರಮುಖ ಸುದ್ದಿ

ಕೊರೊನಾ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ.!

ನವದೆಹಲಿ,ಜೂ.6-ಕೊರೊನಾ ವೈರಸ್ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಗಂಭೀರ ಸ್ವರೂಪದ ಅನಾರೋಗ್ಯ ಕಾಡದಿದ್ದರೆ, ಅಂತಹವರನ್ನು ಆಸ್ಪತ್ರೆಗೆ ದಾಖಲಾದ 24 ಗಂಟೆಗಳಲ್ಲಿಯೇ ಮನೆಗೆ ಕಳುಹಿಸಲಾಗುತ್ತದೆ. ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಯಲ್ಲಿಯೇ ಇಂಥದ್ದೊಂದು ಸಲಹೆ ನೀಡಲಾಗಿದೆ.

ಗುಣಲಕ್ಷಣಗಳಿಲ್ಲದ, ಲಘುವಾಗಿ ಸೋಂಕಿಗೆ ಒಳಗಾದ ರೋಗಿಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅಂಥವರನ್ನು 24 ಗಂಟೆಯೊಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿ ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

ಸೋಂಕಿಗೆ ಒಳಗಾದವರನ್ನು ವಿವಿಧ ಹಂತಗಳಲ್ಲಿ ವರ್ಗೀಕರಿಸಲಾಗುತ್ತದೆ. ಗುಣಲಕ್ಷಣಗಳೇ ಇಲ್ಲದವರಿಂದ ಹಿಡಿದು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾದವರ ತನಕ ಹಲವು ಹಂತಗಳಿವೆ. ಕೊರೊನಾದಿಂದ ಲಘು ಸೋಂಕಿಗೆ ಒಳಗಾದವರನ್ನು ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ದೆಹಲಿ ಡಿಸಿಎಂ ಮನೀಷ್​ ಸಿಸೋಡಿಯಾ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ತಿಳಿಸಿದ್ದಾರೆ.

ಕೆಮ್ಮು ಹಾಗೂ ಜ್ವರ ಕಾಣಿಸಿಕೊಳ್ಳುವುದು ಲಘು ಸೋಂಕು ಎಂದು ವರ್ಗೀಕರಿಸಲಾಗಿದೆ. ಉಸಿರಾಟದ ತೀವ್ರತೆ ಸೂಚ್ಯಂಕ 15ಕ್ಕಿಂತ ಹೆಚ್ಚಿದ್ದರೆ ಮಧ್ಯಮ ಹಾಗೂ 30ಕ್ಕಿಂತ ಹೆಚ್ಚಾದರೆ ಗಂಭೀರ ತೊಂದರೆ ಎಂದು ಪರಿಗಣಿಸಲಾಗುತ್ತದೆ.

ಸದ್ಯ ಅಮೆರಿಕ ಸೇರಿ ಹಲವು ದೇಶಗಳಲ್ಲಿ, ಲಘು ಸೋಂಕಿಗೆ ಒಳಗಾದವರನ್ನು ತಪಾಸಣೆ ನಡೆಸಿ ಕ್ವಾರಂಟೈನ್​ನಲ್ಲಿ ಇರುವಂತೆ ತಿಳಿಸಿ ಮನೆಗೆ ಕಳುಹಿಸಲಾಗುತ್ತಿದೆ. ಕರೊನಾದಿಂದ ತೀರಾ ಗಂಭೀರ ಸ್ವರೂಪದ ಅನಾರೋಗ್ಯ ಉಂಟಾದಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ.

ಸದ್ಯ ದೆಹಲಿಯಲ್ಲಿ 26,000 ಸೋಂಕಿತರಿದ್ದು, 708 ಜನರು ಮೃತಪಟ್ಟಿದ್ದಾರೆ. 10,000ಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. (ಎಂ.ಎನ್)

Leave a Reply

comments

Related Articles

error: