ಪ್ರಮುಖ ಸುದ್ದಿಮನರಂಜನೆ

ಚಿರನಿದ್ರೆಗೆ ಜಾರಿದ ಸ್ಯಾಂಡಲ್ ವುಡ್ ಖ್ಯಾತ ನಟ ‘ಚಿರು’ : ಶಾಕ್ ನಲ್ಲಿ ಸ್ಯಾಂಡಲ್ ವುಡ್

ರಾಜ್ಯ(ಬೆಂಗಳೂರು)ಜೂ.7:-  ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು  ನಿಧನರಾಗಿದ್ದು ನಟನ ಸಾವಿನ ಸುದ್ದಿ ತಿಳಿಯುತ್ತಲೇ  ಸ್ಯಾಂಡಲ್ ವುಡ್ ಶಾಕ್ ಗೆ ಒಳಗಾಗಿದೆ.

ಅವರಿಗೆ ಕೇವಲ 39ವರ್ಷ ವಯಸ್ಸಾಗಿತ್ತು.   ಚಿರಂಜೀವಿ ಸರ್ಜಾಗೆ ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು . ಹೀಗಾಗಿ ಅವರನ್ನು  ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಗಿತ್ತು.  ಉಸಿರಾಟದ ತೊಂದರೆ ಜೊತೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ನಿಯಮಗಳಂತೆ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಾಗಿದೆ. ನಿನ್ನೆಯ ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.   ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಮೃತದೇಹ ಇರಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಪೋಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಪೊಲೊ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರ ಮೇ.2ರಂದು ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಬದುಕಿಗೆ ಕಾಲಿಟ್ಟು  ನಂತರ ಸೀಜರ್​, ಸಿಂಗಾ, ಅಮ್ಮಾ ಐ ಲವ್​ ಯು ಸೇರಿದಂತೆ  20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು.  ಶಿವಾರ್ಜುನ ಅವರ ಕೊನೆಯ ಸಿನಿಮಾ. ಇದಲ್ಲದೆ, ನಾಲ್ಕೈದು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದರು.  ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ ಇಂದು ಮೃತಪಟ್ಟಿದ್ದಾರೆ. ಇದು ಸಾವಿರಾರು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚಿತ್ರರಂಗ ಕಂಬನಿ ಮಿಡಿದಿದೆ.

ಮಾಧ್ಯಮ ಗಳಿಗೆ ನಟಿ ತಾರಾ ಪ್ರತಿಕ್ರಿಯಿಸಿ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮಧುಗಿರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.  (ಎಸ್.ಎಚ್)

Leave a Reply

comments

Related Articles

error: