ಪ್ರಮುಖ ಸುದ್ದಿಮೈಸೂರು

ಕೊರೋನಾ ಲಾಕ್‌ಡೌನ್ ಸಡಿಲಿಕೆ ಬಳಿಕ ಇಂದು ಪುನರಾರಂಭಗೊಂಡ ಶ್ರೀ ಚಾಮರಾಜೇಂದ್ರ ಮೃಗಾಲಯ

ಮೈಸೂರು,ಜೂ.8:- ಇಂದಿನಿಂದ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿತು.

ಮೃಗಾಲಯದ ಪ್ರವೇಶ ದ್ವಾರಕ್ಕೆ ತಳಿರುತೋರಣಗಳಿಂದ ಅಲಂಕರಿಸಲಾಗಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ  ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಕಳೆದೆರಡು ತಿಂಗಳಿನಿಂದ ಮುಚ್ಚಲಾಗಿತ್ತು.  ಕೊರೋನಾ ಲಾಕ್‌ಡೌನ್ ಸಡಿಲಿಕೆ ಬಳಿಕ ಇಂದು ಪುನರಾರಂಭಗೊಂಡಿದೆ. ಮೃಗಾಲಯ ಪುನರಾರಂಭಕ್ಕೆ  ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಸಚಿವ ಎಸ್ ಟಿ ಸೋಮಶೇಖರ್, ಶಾಸಕರುಗಳಾದ ರಾಮದಾಸ್, ಜಿ.ಟಿ ದೇವೆಗೌಡ, ಎಲ್ ನಾಗೇಂದ್ರ ಮೇಯರ್ ತಸ್ನಿಂ ಚಾಲನೆ ನೀಡಿದರು.

ಮೃಗಾಲಯದ ಆವರಣದೊಳಗಿರುವ ತಾಯಿ ಚಾಮುಂಡೇಶ್ವರಿ ಪುಟ್ಟ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಕೊರೋನಾ ಹರಡದಂತೆ ಮುಂಜಾಗೃತಾ ಕ್ರಮಗಳ ಪಾಲನೆ ಮಾಡಬೇಕು. ಪ್ರವಾಸಿಗರು, ಸಿಬ್ಬಂದಿ, ಪ್ರಾಣಿ-ಪಕ್ಷಿಗಳ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇದೇ ವೇಳೆ ಸೂಚನೆ ನೀಡಿದರು. ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಮೃಗಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಮೃಗಾಲಯ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದ್ದು, 1 ಗಂಟೆ ಅವಧಿಯಲ್ಲಿ 1 ಸಾವಿರ ಮಂದಿ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮೃಗಾಲಯ ಸಾರ್ವಜನಿಕರ ವೀಕ್ಷಣೆಗೆ ತೆರೆದ ದಿನವೇ ಕೆಲವು ಮಂದಿ ಪ್ರಾಣಿ-ಪಕ್ಷಿ ಪ್ರಿಯರು ವೀಕ್ಷಣೆಗೆ ಆಗಮಿಸಿರುವುದು ವಿಶೇಷವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: