ಕರ್ನಾಟಕಪ್ರಮುಖ ಸುದ್ದಿ

ಹಸಿರು ವಲಯವಾಗಿದ್ದ ಚಾಮರಾಜನಗರ ಜಿಲ್ಲೆಗೂ ಎಂಟ್ರಿ ಕೊಟ್ಟ ಕೊರೊನಾ?

ಚಾಮರಾಜನಗರ,ಜೂ.9-ಹಸಿರು ವಲಯವಾಗಿದ್ದ ಚಾಮರಾಜನಗರ ಜಿಲ್ಲೆಗೂ ಕೊರೊನಾ ವೈರಸ್ ಸೋಂಕು ಕಾಲಿಟ್ಟಿದೆ ಎನ್ನಲಾಗಿದೆ.

ಮಹಾರಾಷ್ಟ್ರದಿಂದ ಚಾಮರಾಜನಗರ ಜಿಲ್ಲೆಗೆ ಹಿಂದಿರುಗಿ ಕ್ವಾರಂಟೈನ್ ಕೇಂದ್ರದಲ್ಲಿರುವ 25 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಪಾಸಿಟಿವ್ ಇರುವ ವ್ಯಕ್ತಿ ಈಗಾಗಲೇ ಕ್ವಾರಂಟೈನ್‌ನಲ್ಲಿರುವ ಕಾರಣ ಇತರರಿಗೆ ಸೋಂಕು ಹರಡಿರುವ ಸಾಧ್ಯತೆ ಇಲ್ಲ.

ಪಾಸಿಟಿವ್ ವರದಿಯನ್ನು ಜಿಲ್ಲಾಡಳಿತ ಮಧ್ಯಾಹ್ನದ ವೇಳೆಗೆ ಪ್ರಕಟಿಸುವ ಸಾಧ್ಯತೆ ಇದೆ. ಆ ಮೂಲಕ ಚಾಮರಾಜನಗರ ಜಿಲ್ಲೆ ಕಾಯ್ದುಕೊಂಡಿದ್ದ ಹಸಿರು ಶ್ರೇಯ ಕಳಚಿದಂತಾಗಿದೆ.

ಇದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೋಂಕು ಹರಡಿದಂತಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೊರೊನಾ ಪ್ರವೇಶಿಸಿದ್ದರು, ಚಾಮರಾಜನಗರ ಜಿಲ್ಲೆಗೆ ಮಾತ್ರ ಎಂಟ್ರಿ ಕೊಟ್ಟಿರಲಿಲ್ಲ.

25 ವರ್ಷದ ಯುವಕ ಇತ್ತೀಚೆಗೆ ಮಹಾರಾಷ್ಟ್ರದಿಂದ ಚಾಮರಾಜನಗರಕ್ಕೆ ಬಂದಿದ್ದ. ಈತನನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಜೊತೆಗೆ ಯುವಕನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು, ಇದು ಪಾಸಿಟಿವ್‌ ಎಂದು ದೃಢಪಟ್ಟಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಜಿಲ್ಲಾಡಳಿತ ಘೋಷಣೆ ಮಾಡಬೇಕಷ್ಟೆ. ಇಂದಿನ ಬುಲೆಟಿನ್‌ನಲ್ಲಿ ಮಾಹಿತಿ ಹೊರಬರಲಿದೆ.

ಚಾಮರಾಜನಗರ ಜಿಲ್ಲೆ ಹಸಿರು ವಲಯವಾಗಿಯೇ ಇತ್ತು. ಕೊರೊನಾ ಕೇಸ್‌ ಇಲ್ಲದೆ ಇದ್ದುದರಿಂದ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿಯವರಿಗೆ ಕರೆ ಮಾಡಿ ಜಿಲ್ಲೆಯನ್ನು ಕೊರೊನಾ ಮುಕ್ತವಾಗಿಡಲು ಶ್ರಮಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದರು. ಇದೀಗ ಮೊದಲ ಕೇಸ್‌ ದೃಢಪಟ್ಟಿದೆ ಎಂದು ತಿಳಿದುಬಂದಿದೆ. (ಎಂ.ಎನ್)

 

Leave a Reply

comments

Related Articles

error: