ದೇಶ

ತೆಲಂಗಾಣ: ಬೇರೆ ಜಾತಿಯ ಹುಡುಗನೊಂದಿಗೆ ಪ್ರೀತಿ, ಮದುವೆಗೂ ಮುನ್ನ ಗರ್ಭಿಣಿ; ಮಗಳನ್ನು ಕೊಂದ ತಂದೆ

ಹೈದರಾಬಾದ್,ಜೂ.9-ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಕಲುಕುಂಟ್ಲ ಗ್ರಾಮದಲ್ಲಿ ನಡೆದಿದೆ.

ದಿವ್ಯಾ (18) ಹತ್ಯೆಯಾದ ಯುವತಿ. ಈಕೆ ಮೂರು ತಿಂಗಳ ಗರ್ಭಿಣಿ ಆಗಿದ್ದಳು. ದಿವ್ಯಾ ಜಿಲ್ಲೆಗೆ ಗಡಿಭಾಗದಲ್ಲಿರುವ ಆಂಧ್ರದ ಕರ್ನೂಲ್​ನಲ್ಲಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಪದವಿ ಓದುತ್ತಿದ್ದಳು.

ಕಳೆದ ಶನಿವಾರ ದಿವ್ಯಾಳಿಗೆ ಜ್ವರ ಬಂದಿತ್ತು. ಹೀಗಾಗಿ ಪೋಷಕರು ಆಕೆಯನ್ನು ಕರ್ನೂಲ್​ನಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ದಿವ್ಯಾ 13 ವಾರಗಳ ಗರ್ಭಿಣಿ ಎಂಬ ವಿಷಯ ತಿಳಿಯುತ್ತದೆ. ಆಗ ಪೋಷಕರು ಆಕೆಗೆ ಗರ್ಭಪಾತ ಮಾಡಿಸಲು ಮುಂದಾಗುತ್ತಾರೆ. ಆಗ ದಿವ್ಯಾ ಪ್ರೇಮ ವಿಚಾರ ತಿಳಿಸಿ, ತಾನು ಆ ಹುಡುಗನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ.

ಪಾಲಕರು ಆಕೆಯನ್ನ ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಬರುತ್ತಾರೆ. ಆದರೆ, ಆಕೆಯನ್ನ ಕೊಂದುಹಾಕಲು ಸಂಚು ರೂಪಿಸುತ್ತಾರೆ. ಅದರಂತೆ ದಿವ್ಯಾಳನ್ನು ಶನಿವಾರ ರಾತ್ರಿ ಮನೆಯ ಒಳಗೆ ಮಲಗಿಸುತ್ತಾರೆ. ಉಳಿದವರೆಲ್ಲರೂ ಮನೆಯ ವರಾಂಡದಲ್ಲಿ ಮಲಗುತ್ತಾರೆ. ಮಧ್ಯರಾತ್ರಿಯಾಗುತ್ತಿದ್ದಂತೆಯೇ ತಂದೆ ಭಾಸ್ಕರಯ್ಯ ಒಳಗೆ ಹೋಗಿ ದಿಂಬಿನಿಂದ ಮಗಳನ್ನ ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಭಾನುವಾರದಂದು ಭಾಸ್ಕರಯ್ಯ ತನ್ನ ಮಗಳು ಇದ್ದಕ್ಕಿದ್ದಂತೆ ಸತ್ತುಹೋಗಿದ್ದಾಳೆಂದು ಗ್ರಾಮಸ್ಥರಿಗೆ ಹೇಳಿದ್ದಾನೆ. ಗ್ರಾಮದ ಹಿರಿಯರೊಬ್ಬರಿಗೆ ಅನುಮಾನ ಬಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ತಿಳಿದುಬಂದಿದೆ. (ಎಂ.ಎನ್)

 

Leave a Reply

comments

Related Articles

error: