ಮೈಸೂರು

ಬಹುಹಂತದ ಪಾರ್ಕಿಂಗ್ ಗೆ ಜಾಗಕೊಂಡುಕೊಳ್ಳಲು ಪ್ರತಿಎಕರೆಗೆ 87.50ಲಕ್ಷರೂ.ನಿಗದಿ : ಡಿ.ರಂದೀಪ್

ಚಾಮುಂಡಿ ಬೆಟ್ಟದಲ್ಲಿ ದೇವಿಕೆರೆ ಹಾಗೂ ಬಹುಹಂತದ ಪಾರ್ಕಿಂಗ್‍ಗೆ ನೇರವಾಗಿ ಸಂಪರ್ಕಿಸುವ ಕಾಮಗಾರಿಗೆ ಅವಶ್ಯಕತೆ ಇರುವ ಜಾಗವನ್ನು ಕೊಂಡುಕೊಳ್ಳಲು ಜಿಲ್ಲಾಡಳಿತ ಕ್ರಮಕೈಗೊಂಡಿದ್ದು ಪ್ರತಿ ಎಕರೆಗೆ 87.50 ಲಕ್ಷ ರೂ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾಗದ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದಲ್ಲಿ ವಿವಿಧಅ ಭಿವೃದ್ಧಿ ಕಾಮಗಾರಿಗೆ 5.27 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಅದಲ್ಲಿ ರಸ್ತೆ ಸೇರಿದಂತೆ ಪಾರ್ಕಿಂಗ್‍ಗೂ ಸಹ ಜಾಗವನ್ನು ಮೀಸಲಿರಿಸಲಾಗಿತ್ತು. ಈ ಜಾಗದಲ್ಲಿ 2 ಎಕರೆ ಬಿ ಖರಾಬ್ ಜಾಗವಾಗಿದ್ದು, ಉಳಿದ 3.27 ಎಕರೆ 15 ಜನರಿಗೆ ಸೇರಿದೆ. ನೇರವಾಗಿ ಭೂ ಸ್ವಾಧೀನ ಮಾಡಿಕೊಳ್ಳುವ ಬದಲು ಮಾಲೀಕರೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಭೂ ಮಾಲೀಕರು ಎಕರೆಗೆ ಒಂದು ಕೋಟಿ ಕೇಳುತ್ತಿದ್ದಾರೆ. ಆದರೆ ಅದು ಆಗದ ಮಾತು. 2013ರಲ್ಲಿ `ಭೂಸ್ವಾಧೀನ ಮಾಡಿಕೊಂಡಾಗ ಎಕರೆಗೆ 23 ಲಕ್ಷ ನೀಡಿತ್ತು. ಆದರೆ ಈಗ ಸರ್ಕಾರದ ಆದೇಶದ ಮೇರೆಗೆ ಎಕರೆಗೆ 79.50 ಲಕ್ಷ ರೂ ನಿಗದಿ ಮಾಡಿದ್ದು, `ಭೂ ಮಾಲೀಕರು ಇದಕ್ಕೆ ಸಮ್ಮತಿ ಸೂಚಿಸಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಭೂ ಮಾಲೀಕರು ಜಿಲ್ಲಾಧಿಕಾರಿಗಳು ಸರ್ಕಾರದ ನಿರ್ದೇಶನದ ಮೊತ್ತದ ಮೇಲೆ ಶೇ.20ರಷ್ಟು ಹೆಚ್ಚಳ ಮಾಡುವ ಅಧಿಕಾರ ಹೊಂದಿದ್ದು ಎಕರೆಗೆ 96 ಲಕ್ಷ ರೂ ನೀಡಬೇಕು. ವಾಣಿಜ್ಯ ಕಟ್ಟಡದಲ್ಲಿ ಭೂ ಮಾಲೀಕರಿಗೆ ಮಳಿಗೆ ನೀಡಬೇಕು. ದೇವಸ್ಥಾನಕ್ಕೆ ವಿಶೇಷ ಪ್ರವೇಶಾವಕಾಶವನ್ನು ನಮ್ಮ ಕುಟುಂಬದವರಿಗೆ ವರ್ಷವಿಡೀ ನೀಡಬೇಕು ಎಂಬ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು.
ಈ ಎಲ್ಲಾ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದ ಜಿಲ್ಲಾಧಿಕಾರಿ ರಂದೀಪ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್ ಅವರಿಗೆ ವಿಶೇಷ ಗುರುತಿನ ಕಾರ್ಡ್ ನೀಡುವಂತೆ ಸೂಚಿಸಿದರು. ಚರ್ಚೆಯ ಬಳಿಕ ಎಕರೆಗೆ 87.50 ಲಕ್ಷ ರೂ ನಿಗದಿ ಮಾಡಲಾಯಿತು. ಇದಕ್ಕೆ `ಭೂ ಮಾಲೀಕರು ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಾಧಿಕಾರಿ ಸಿ.ಎಲ್.ಆನಂದ್, ಮುಜರಾಯಿ ತಹಶೀಲ್ದಾರ್ ಯತಿರಾಜ್ ಸಂಪತ್‍ಕುಮಾರ್ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಕುಸುಮ ಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: