ಮೈಸೂರು

ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಸಜೀವ ಗುಂಡು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ : ಕಪಿಲಾ ನದಿಯಲ್ಲಿ 20ಗುಂಡುಗಳು ಪತ್ತೆ

ಮೈಸೂರು,ಜೂ.10:- ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಸಜೀವ ಗುಂಡು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಲಭಿಸಿದ್ದು ನಂಜನಗೂಡಿನ ಸೇತುವೆ ಬಳಿ ಕಪಿಲಾ ನದಿಯಲ್ಲಿ 20ಗುಂಡುಗಳು ಪತ್ತೆಯಾಗಿವೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ  ಹೆಡ್ ಕಾನ್ಸಟೇಬಲ್ ರೈಟರ್ ಕೃಷ್ಣೇಗೌಡ ಈಗಾಗಲೇ 30ಸಜೀವ ಗುಂಡುಗಳನ್ನು ಒಪ್ಪಿಸಿದ್ದರು. ಉಳಿದ 20ಗುಂಡುಗಳನ್ನು ನಂಜನಗೂಡಿನ ರೈಲ್ವೆ ಸೇತುವೆ ಬಳಿ ಕಪಿಲಾ ನದಿಗೆ ಎಸೆದಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದರು ಎನ್ನಲಾಗಿದೆ.

ಹೆಚ್ಚುವರಿ ಎಸ್ಪಿ ಸ್ನೇಹಾ ನೇತೃತ್ವದ ತನಿಖಾ ತಂಡ ನಿನ್ನೆ ಸಂಜೆ ಆರೋಪಿ ಕೃಷ್ಣೇಗೌಡ ಸಮ್ಮುಖದಲ್ಲಿ ಕಪಿಲಾ ನದಿಯಲ್ಲಿ ಗುಂಡುಗಳ ಶೋಧ ಕಾರ್ಯಕ್ಕೆ ಮುಂದಾಗಿದ್ದು ಸತತ ಎರಡುಗಂಟೆಗಳ ಕಾಲ ನಡೆದ ಶೋಧ ಕಾರ್ಯದಲ್ಲಿ 20ಗುಂಡುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ಕೃಷ್ಣೇಗೌಡ ಯಾವ ಕಾರಣಕ್ಕಾಗಿ ಕಪಿಲಾ ನದಿಗೆ ಜೀವಂತ ಗುಂಡುಗಳನ್ನು ಎಸೆದಿದ್ದರು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳದ ಕಾರಣ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ತನಿಖೆ ಸಂಪೂರ್ಣಗೊಂಡ ಬಳಿಕವಷ್ಟೇ ಎಲ್ಲ ಸತ್ಯ ಹೊರಬರಲಿದೆ ಎಂದು ಹೆಚ್ಚುವರಿ ಎಸ್ಪಿ ಸ್ನೇಹಾ ಮಾಧ್ಯಮದವರಿಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿಗಳಾದ ಪ್ರಭಾಕರ್ ರಾವ್ ಶಿಂಧೆ, ಉಮೇಶ್, ಸಿಪಿಐ ರಾಜಶೇಖರ್, ಪಿಎಸ್ ಐ ಸತೀಶ್ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: