ಮೈಸೂರು

ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು,ಜೂ.10:- ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಪ್ರೈ.ಲಿ ಕಾರ್ಖಾನೆಯ ಆಡಳಿತ ಕಂಪನಿಯ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿರುವುದನ್ನು ವಿರೋಧಿಸಿ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಪ್ರೈ ಲಿ.ನ ಕಾರ್ಖಾನೆಯ ಆಡಳಿತ ವರ್ಗದವರು ತಮ್ಮ ಕಾರ್ಮಿಕರನ್ನು ಹಲವಾರು ರೀತಿಗಳಲ್ಲಿ ಕಿರುಕುಳ ನೀಡಿ ತೊಂದರೆಗಳನ್ನು ಕೊಟ್ಟು ಮತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು ಈ ಬಗ್ಗೆ ಪ್ರಾಧಿಕಾರದ ಮುಂದೆ ಹಲವಾರು ಬಾರಿ ಹೋರಾಟ ಮಾಡಿದ್ದೇವೆ ಎಂದರು.

ಈ ಕಂಪನಿಯ ಆಡಳಿತವು ತಿರುಪತಿಯ ಕಾರ್ಖಾನೆಗೆ ಕೆಲಸಕ್ಕೆ ಹಾಜರಾಗಿರುವ ಕಾರ್ಮಿಕರನ್ನು ಬೀದಿಪಾಲು ಮಾಡಿದ ಮೇಲೆ ಈ ಕಾರ್ಮಿಕರು 2018ರ ನವೆಂಬರ್ ತಿಂಗಳಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ತೆರಳಿ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಯವರ ಕಛೇರಿಯ ಆದೇಶದ ಮೇರೆಗೆ ನಡೆದಿರುವ ಸಂಧಾನ ಸಭೆಯಲ್ಲಿ 7/1/2019ರಂದು ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಒಂದು ಒಡಂಬಡಿಕೆ ಆಗಿತ್ತು. ಆ ಒಡಂಬಡಿಕೆ ಪತ್ರದ ಪ್ರಕಾರ ಸುಮಾರು 60ಜನ ಕಾರ್ಮಿಕರು ತಿರುಪತಿಯ  ವಿಕೃತಮಾಲ ಕಾರ್ಖಾನೆಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಬೇಕು. ಅದರ ಒಳಗೆ ಹಂತಹಂತವಾಗಿ ಮೈಸೂರಿನ ಕಾರ್ಖಾನೆಗೆ ತೆಗೆದುಕೊಳ್ಳುವುದು ಹಾಗೂ ಎಲ್ಲಾ ಮಹಿಳಾ ಕಾರ್ಮಿಕರಿಗೂ ಮೈಸೂರಿನಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವುದಾಗಿಯೂ ಮತ್ತು ಸಂಘ ನೀಡುವಂತಹ ಪಟ್ಟಿಯ ಪ್ರಕಾರ 7ಜನ ಪುರುಷ ಕಾರ್ಮಿಕರಿಗೆ ಮೈಸೂರು ಘಟಕದಲ್ಲಿ ಕೆಲಸ ನೀಡುವುದಾಗಿಯೂ ಒಡಂಬಡಿಕೆ ಪತ್ರದಲ್ಲಿ ಆಡಳಿತ ವರ್ಗದವರು ಒಪ್ಪಿ ಸಹಿ ಮಾಡಿರುತ್ತಾರೆ. ಆದರೆ ಆಡಳಿತ ವರ್ಗದವರು ಈ ಒಡಂಬಡಿಕೆ ಪತ್ರದಂತೆ ನಡೆದುಕೊಂಡಿಲ್ಲ. ತಿರುಪತಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೊವೀಡ್-19 ರೋಗದ ಕಾರಣದಿಂದ ಮೈಸೂರಿಗೆ ಬರಹೇಳಿ ಕೋವಿಡ್-19ಕಾರಣ ನೀಡಿ ಕೆಲಸದಿಂದ ತೆಗೆದುಹಾಕಿ ವಿಕೃತಮಾಲದಲ್ಲಿರುವ ಕಾರ್ಖಾನೆಯನ್ನು ಮುಚ್ಚಿರುವುದಾಗಿ ಮಾಹಿತಿ ನೀಡಿದ್ದಾರೆ. ಕೋವಿಡ್-19 ಕಾರಣ ಕೊಟ್ಟು ಕಾರ್ಮಿಕರನ್ನು ಬೀದಿಪಾಲು ಮಾಡಿ ಕಾನೂನಿನ ವಿರುದ್ಧವಾಗಿ ನಡೆದುಕೊಂಡಿರುವ ಈ ಆಡಳಿತ ವರ್ಗದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: