ಮೈಸೂರು

ರಂಗಾಯಣದಲ್ಲಿ ಮೂಡಿದ `ಕೊರೊನಾ ಸಂಹಾರ’ ಚಿತ್ರ ಮಾಲಿಕೆ: ಜೂ.17ಕ್ಕೆ ಅನಾವರಣ

ಮೈಸೂರು,ಜೂ.11-ಇಡೀ ವಿಶ್ವವನ್ನೇ ಕೊರೊನಾ ವೈರಸ್ ಮಹಾಮಾರಿ ಆವರಿಸಿದೆ. ಕೊರೊನಾ ವೈರಸ್ ಕುರಿತು, ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಇದೀಗ ರಂಗಾಯಣ ಸಹ ಜಾಗೃತಿ ಮೂಡಿಸಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ರಂಗಾಯಣದ ಆವರಣದಲ್ಲಿ `ಕೊರೊನಾ ಸಂಹಾರ’ ಎಂಬ ಅರ್ಥಕೊಡುವ ರೀತಿ ಚಿತ್ರಮಾಲಿಕೆಯೊಂದು ರೂಪುಗೊಳ್ಳುತ್ತಿದೆ. ಬಾಲಗೋಪಾಲನಾಗಿ ಶ್ರೀಕೃಷ್ಣ ಗೋಪಾಲಕರನ್ನು ರಕ್ಷಿಸುವ ಸಲುವಾಗಿ ಸರೋವರದಲ್ಲಿದ್ದ ಕಾಳಿಂಗ ಸರ್ಪವನ್ನು ಮರ್ಧನ ಮಾಡಿದ. ಅದೇ ಕಲ್ಪನೆಯಲ್ಲಿ ಕೊರೊನಾ ಸಂಹಾರ ಚಿತ್ರಮಾಲಿಕೆ ಸಿದ್ಧಪಡಿಸಲಾಗುತ್ತಿದೆ.

ಚೀನಾದವರ ಆಹಾರ ಪದ್ಧತಿ, ಅದರಿಂದ ಜನ್ಮತಳೆದ ಕೊರೊನಾ ವೈರಾಣು, ಅದು ಇಡೀ ವಿಶ್ವಕ್ಕೆ ವ್ಯಾಪಿಸಿದ ರೀತಿ, ವಿಶ್ವ ಅದರ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿರುವ ರೀತಿ, ವೈರಾಣು ವಿರುದ್ಧ ಕೊರೊನಾ ವಾರಿಯರ್ಸ್ ಯುದ್ಧ ಮಾಡುತ್ತಿರುವುದು ಇದೆಲ್ಲವನ್ನು ಈ ಚಿತ್ರಮಾಲಿಕೆಯಲ್ಲಿ ಕಾಣಬಹುದಾಗಿದೆ.

ರಂಗಾಯಣದ ಹೆಚ್.ಕೆ.ದ್ವಾರಕನಾಥ್ ಅವರ ಕಲ್ಪನೆಯ ಚಿತ್ರಕ್ಕೆ ಕಲಾವಿದ ರಂಗನಾಥ್ ಅವರು ತಮ್ಮ ಕುಂಚದಿಂದ ಜೀವ ತುಂಬುತ್ತಿದ್ದಾರೆ. ರಂಗನಾಥ್ ಅವರು ಕಳೆದ ಎಂಟು ದಿನಗಳಿಂದ ಚಿತ್ರಮಾಲಿಕೆ ಬಿಡಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಳೆಗೆ ಚಿತ್ರ ಪೂರ್ಣಗೊಳ್ಳಲಿದೆ.

ಈ ಕುರಿತು `ಸಿಟಿ ಟುಡೆ’ಯೊಂದಿಗೆ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು, ಕಳೆದ ಒಂದು ತಿಂಗಳಿಂದ ರಂಗಾಯಣದಲ್ಲಿ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಆದರೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಂಗಾಯಣದಿಂದ ನಾಟಕ ಪ್ರದರ್ಶನ ಮಾಡುವುದಕ್ಕೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕಲೆಯನ್ನೇ ಇಟ್ಟುಕೊಂಡು ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಿದಾಗ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವೆನ್ನಿಸಿತು. ಹೀಗಾಗಿ ರಂಗಾಯಣ ಕೊರೊನಾ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು.

ಅದರಂತೆ ನಮ್ಮ ದ್ವಾರಕನಾಥ್ ಅವರ ಕಲ್ಪನೆಯ ಕೊರೊನಾ ಸಂಹಾರ ಚಿತ್ರಮಾಲಿಕೆಗೆ ಕಲಾವಿದ ರಂಗನಾಥ್ ಅವರು ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಚಿತ್ರಮಾಲಿಕೆಯನ್ನು ಜೂ.17 ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅನಾವರಣಗೊಳಿಸಲಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಚಿತ್ರಮಾಲಿಕೆಯನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಬೆಳಿಗ್ಗೆ 10.30 ರಿಂದ 5 ರವರೆಗೆ ಸಾರ್ವಜನಿಕರು ಬಂದು ಚಿತ್ರಮಾಲಿಕೆಯನ್ನು ನೋಡಬಹುದಾಗಿದೆ. ಆದರೆ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ. ರಂಗಾಯಣ ಒಳ ಪ್ರವೇಶಿಸುವ ಮೊದಲು ಅವರಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡುವುದರ ಜೊತೆಗೆ ಸ್ಯಾನಿಟೈಸರ್ ನೀಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕೊರೊನಾ ಸಂದರ್ಭದಲ್ಲಿ ನಾಟಕ ಬಿಟ್ಟು ಬೇರೆ ಯಾವ ಕೆಲಸಗಳನ್ನು ಮಾಡಬಹುದು ಎಂದು ಯೋಚಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕೆಲಸವನ್ನು ಮಾಡಲಾಗುತ್ತಿದೆ. ರಂಗಾಯಣದಿಂದ ಅಲ್ಪಾವಧಿ ಕೋರ್ಸ್ ಗಳನ್ನು ಆರಂಭಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಈ ಬಗ್ಗೆ ಇನ್ನೆರೆಡು ದಿನಗಳಲ್ಲಿ ರಂಗಾಯಣದಿಂದ ಅಧಿಕೃತವಾಗಿ ಮಾಹಿತಿ ನೀಡಲಾಗುವುದು ಎಂದರು. (ಎಂ.ಎನ್)

Leave a Reply

comments

Related Articles

error: