ಮೈಸೂರು

ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಪ್ರತಿಭಟನೆ

ರಾಜ್ಯ ಅನ್ನದಾತರ ಸಾಲಮನ್ನಾ ಮಾಡಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ವೇತನವನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಜಾ ಪಾರ್ಟಿಯ ಸದಸ್ಯರು ಪ್ರತಿಭಟನೆ ನಡೆಸಿದರು.

ಮೈಸೂರು ನ್ಯಾಯಾಲಯದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರೈತರು ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಮತ್ತು ಜಮೀನಿನಲ್ಲಿ ವ್ಯವಸಾಯ ಮಾಡಬೇಕೆಂಬ ಉದ್ದೇಶದಿಂದ ಸಹಕಾರಿ ಸಂಸ್ಥೆಯ ಬ್ಯಾಂಕ್ ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ಪಡೆದುಕೊಂಡು ವ್ಯವಸಾಯವನ್ನು ಅಭಿವೃದ್ಧಿ ಮಾಡಿ ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ಇದೀಗ ಅವರು ಸಾಲದ ಸುಳಿಗೆ ಸಿಲುಕಿ ಕಷ್ಟ ಅನುಭವಿಸಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಕಷ್ಟ ಕಾರ್ಪಣ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಹಕಾರಿ ಸಂಘ ಸಂಸ್ಥೆಗಳ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ವ್ಯವಸಾಯದ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಸದೃಢ ಭಾರತ ಕಟ್ಟಲು ಅವಿರತವಾಗಿ ದುಡಿದು ಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರವರ ಕುಟುಂಬ ಜೀವನವನ್ನು ಭದ್ರ ಮಾಡಿಕೊಳ್ಳಲು ಮಾಸಿಕ 10ಸಾವಿರ ಹಾಗೂ ಸಹಾಯಕಿಯರಿಗೆ ಮಾಸಿಕ 6ಸಾವಿರ ರೂಪಾಯಿ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಜಾ ಪಾರ್ಟಿಯ ಸಂಚಾಲಕ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: