
ದೇಶಪ್ರಮುಖ ಸುದ್ದಿ
ದೇಶದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 10,956 ಕೊರೊನಾ ದೃಢ; ನಾಲ್ಕನೇ ಸ್ಥಾನಕ್ಕೇರಿದ ಭಾರತ
ನವದೆಹಲಿ,ಜೂ.12-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ.
ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ. ಅಲ್ಲದೆ, 24 ಗಂಟೆಗಳಲ್ಲಿ 396 ಮಂದಿ ಮೃತಪಟ್ಟಿದ್ದು, ಮಹಾಮಾರಿ ವೈರಸ್ ಗೆ ಬಲಿಯಾದವರ ಸಂಖ್ಯೆ 8498ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಗುರುವಾರ ದಾಖಲೆಯ 3607 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 97,648ಕ್ಕೆ ಏರಿಕೆಯಾಗಿದೆ. ಇನ್ನು ನಿನ್ನೆ ಒಂದೇ ದಿನ 152 ಮಂದಿ ಬಲಿಯಾಗಿದ್ದಾರೆ. ಇದರಿಂದ ಮೃತರ ಸಂಖ್ಯೆ 3590ಕ್ಕೆ ಏರಿಕೆಯಾಗಿದೆ. ಉಳಿದಂತೆ ದೆಹಲಿಯಲ್ಲಿ 1877, ತಮಿಳುನಾಡಿನಲ್ಲಿ 1871, ಗುಜರಾತ್ ನಲ್ಲಿ 513 ಹಾಗೂ ಉತ್ತರಪ್ರದೇಶದಲ್ಲಿ 477 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಪೈಕಿ 2,97,535 ಮಂದಿ ಸೋಂಕಿತರ ಪೈಕಿ 1,47,195 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 1,41,842 ಸಕ್ರಿಯ ಪ್ರಕರಣಗಳಿದೆ.
ನಾಲ್ಕನೇ ಸ್ಥಾನಕ್ಕೇರಿದ ಭಾರತ: ಭಾರತ ಜಾಗತಿಕ ಮಟ್ಟದಲ್ಲಿ ಬ್ರಿಟನ್ ಮತ್ತು ಸ್ಪೇನ್ ರಾಷ್ಟ್ರಗಳನ್ನು ಹಿಂದಿಕ್ಕಿ 6ರಿಂದ 4ನೇ ಸ್ಥಾನಕ್ಕೆ ಏರಿದೆ. ಭಾರತದಲ್ಲಿ ಜ.30ಕ್ಕೆ ಮೊದಲ ಸೋಂಕು ಪತ್ತೆಯಾಗಿತ್ತು. ಆಗ ವಿಶ್ವ ಮಟ್ಟದಲ್ಲಿ 20ರ ಆಸುಪಾಸಿನ ಸ್ಥಾನದಲ್ಲಿದ್ದ ಭಾರತ ಮೇ.25ಕ್ಕೆ 10ನೇ ಸ್ಥಾನ ತಲುಪಿತ್ತು. ಆಗ ಸೋಂಕಿತರ ಸಂಖ್ಯೆ 1.41ಲಕ್ಷ ಇತ್ತು. ಅದಾದ 1 ತಿಂಗಳಲ್ಲಿ ಇದೀಗ 2.97 ಲಕ್ಷ ಸೋಂಕಿತರೊಂದಿಗೆ ದೇಶ 4ನೇ ಸ್ಥಾನಕ್ಕೆ ಏರಿದೆ. ಅಮೆರಿಕಾ. ಬ್ರೆಜಿಲ್, ರಷ್ಯಾ ಹೆಚ್ಚು ಸೋಂಕಿತರೊಂದಿಗೆ ಟಾಪ್ 3 ಸ್ಥಾನದಲ್ಲಿದೆ. (ಎಂ.ಎನ್)