ಮೈಸೂರು

ಏಪ್ರಿಲ್ 10ರಿಂದ ರಂಗಾಯಣದಲ್ಲಿ ಚಿಣ್ಣರ ಕಲರವ : ಸಮಾನತೆ ಚಿಣ್ಣರ ಮೇಳ-2017ಕ್ಕೆ ಚಾಲನೆ

ಮೈಸೂರಿನ ರಂಗಾಯಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಏಪ್ರಿಲ್ 10ರಿಂದ ಮೇ.10ರವರೆಗೆ ಸಮಾನತೆ ಚಿಣ್ಣರಮೇಳ-2017ನ್ನು ಆಯೋಜಿಸಲಾಗಿದೆ ಎಂದು ರಂಗಾಯಣದ ಪ್ರಭಾರ ನಿರ್ದೇಶಕ ದಯಾನಂದ ತಿಳಿಸಿದರು.

ರಂಗಾಯಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 14 ವರ್ಷದ ವಯೋಮಿತಿಯೊಳಗಿನ ಚಿಣ್ಣರಿಗಾಗಿ ಏರ್ಪಡಿಸುವ ಈ ಚಿಣ್ಣರ ಮೇಳವು 19ನೇ ಚಿಣ್ಣರಮೇಳವಾಗಿದ್ದು, ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಚರಿಸಲು ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಟಿಸಲು ಮುಂದಾಗಿದೆ. ಮಕ್ಕಳೊಂದಿಗೆ ಅತಿ ಸೂಕ್ಷ್ಮ ವರ್ತನೆ ಅಗತ್ಯವಾಗಿದ್ದು, ಅವರ ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ, ಸಂತಸದ ವಾತಾವರಣವನ್ನು ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯಬೇಕೆನ್ನುವ ಉದ್ದೇಶದಿಂದ ಸಮಾನತೆ-ಚಿಣ್ಣರಮೇಳ-2017ನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ ಹುಬ್ಬಳ್ಳಿಯ ಸಿಯಾ ಖೋಡೆ ಮೇಳವನ್ನು ಉದ್ಘಾಟಿಸಲಿದ್ದು, ಕಲಾಪ್ರಶಸ್ತಿ ವಿಜೇತ ಅಂತರರಾಷ್ಟ್ರೀಯ ಯೋಗಪಟು ಖುಷಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಮೇಳದಲ್ಲಿ ಸುಮಾ ರಾಜ್ ಕುಮಾರ್ ಅವರಿಂದ ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ, ಸಿವಿ ನಾಗರಾಜ್ ಅವರಿಂದ ಆಹಾರ-ಆರೋಗ್ಯ ಕುರಿತ ಮುಖಾಮುಖಿ, ವಾಸು ದೀಕ್ಷಿತ ಅವರಿಂದ ವಚನ ಗಾಯನ, ಡಾ.ಹಿ.ಶಿ.ರಾಮಚಂದ್ರೇಗೌಡ ಅವರಿಂದ ಕಥೆ ಹೇಳುವ ಕಾರ್ಯಕ್ರಮ, ಕೃಪಾಪಡ್ಕೆಯವರಿಂದ ಜಾನಪದ, ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ಪ್ರೊ.ಜಿ.ಆರ್.ಜನಾರ್ದನ್ ಅವರಿಂದ ಸಸ್ಯಪ್ರಪಂಚ ಕುರಿತಂತೆ ಮುಖಾಮುಖಿ ಹಾಗೂ ಸಾಮೂಹಿಕ ನೃತ್ಯ ಪ್ರಾತ್ಯಕ್ಷಿಕೆ, ಕೆ.ಮನು ಅವರಿಂದ ಪರಿಸರ ನಡಿಗೆ, ಪ್ರಾಚ್ಯವಸ್ತು ಸಂಶೋಧನೆಗಳು ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಪಾರಂಪರಿಕ ನಡಿಗೆ ಮತ್ತು ಮಾಹಿತಿ, ಪೊಲೀಸ್ ಇಲಾಖೆಯ ಶ್ವಾನದಳದಿಂದ ಡಾಗ್ ಶೋ ಪ್ರದರ್ಶನ, ಅಗ್ನಿಶಾಮಕ ದಳದಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಸಮಾನತೆ ಕುರಿತು ಬಸವ ಜಯಂತಿಯಂದು ಲತಾ ಮೈಸೂರು ಅವರಿಂದ ವಿಶೇಷ ಉಪನ್ಯಾಸ, ಪರಿಣಿತರಿಂದ ಡ್ರಾಯಿಂಗ್, ಮಾಸ್ಕ್ ಮೇಕಿಂಗ್ ತರಗತಿಗಳು, ನುರಿತ ರಂಗನಿರ್ದೇಶಕರಿಂದ ಮೇಳದ ಮಕ್ಕಳಿಗೆ ರಂಗತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನ, ಸಮಾನತೆ ಕುರಿತ ಸಂಗೀತ ತರಗತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚಿಣ್ಣರ ಮೇಳಕ್ಕೆ ಸೇರ್ಪಡೆಯಾಗಲು ಏಪ್ರಿಲ್ 3ರಂದು ಬೆಳಿಗ್ಗೆ 10ಗಂಟೆಗೆ ರಂಗಾಯಣದ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಒಬ್ಬರಿಗೆ ಒಂದು ಅರ್ಜಿಯಂತೆ ರೂ.50 ಅರ್ಜಿ ಶುಲ್ಕ ಪಡೆದು 300ಅರ್ಜಿಗಳನ್ನು ನೀಡಲಾಗುವುದು. ಅರ್ಜಿಯನ್ನು ಹಿಂದಿರುಗಿಸಲು ಎಪ್ರಿಲ್ 6 ಕೊನೆಯ ದಿನವಾಗಿದೆ. ಚಿಣ್ಣರ ಮೇಳದ ಶುಲ್ಕವನ್ನು ಮಗುವೊಂದಕ್ಕೆ 2000 ರೂ.ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಪೂರ್ವರಂಗ ಉತ್ಸವ :ರಂಗಾಯಣದ ಭೂಮಿಗೀತದಲ್ಲಿ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಉತ್ಸವ ಏರ್ಪಡಿಸಲಾಗಿದ್ದು, ಏಪ್ರಿಲ್ 5ರಿಂದ 7ರವರೆಗೆ ನಡೆಯಲಿದೆ. ಜೀವನ್ ಕುಮಾರ್ ಹೆಗ್ಗೋಡು ನಿರ್ದೇಶನದಲ್ಲಿ ಬೆಕ್ಕುಬಾವಿ, ಮಾಲತಿ ಸಾಗರ್ ನಿರ್ದೇಶನದಲ್ಲಿ ಮೃಚ್ಛಕಟಿಕ, ಉಮೇಶ್ ಸಾಲಿಯಾನ್ ನಿರ್ದೇಶನದಲ್ಲಿ ಈಡಿಪಸ್ ಮತ್ತು ಅಂತಿಗೊನೆ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪನಿರ್ದೇಶಕಿ  ನಿರ್ಮಲಾ ಮಠಪತಿ, ಕಲಾವಿದ ಮೈಮ್ ರಮೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: