ಮೈಸೂರು

ವಿಶ್ವವಿದ್ಯಾಲಯಗಳಲ್ಲಿ ಏಕರೂಪತೆಯ ಶಿಕ್ಷಣವನ್ನು ಕೈಬಿಡಲು ವಿಶ್ರಾಂತ ಕುಲಪತಿಗಳ ವೇದಿಕೆ ಆಗ್ರಹ

ಮೈಸೂರು,ಜೂ.12:- ವಿಶ್ವವಿದ್ಯಾಲಯಗಳಲ್ಲಿ ಏಕರೂಪತೆಯ ಶಿಕ್ಷಣವನ್ನು ಕೈಬಿಡಬೇಕೆಂದು ವಿಶ್ರಾಂತ ಕುಲಪತಿಗಳ ವೇದಿಕೆಯು ಆಗ್ರಹಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿಗಳ ವೇದಿಕೆಯ ಪ್ರೊ.ಎಸ್.ಎನ್.ಹೆಗಡೆ ಮಾತನಾಡಿ ವಿಶ್ವವಿದ್ಯಾಲಯದಲ್ಲಿ  ಗುಣಮಟ್ಟದ ಶಿಕ್ಷಣ ನೀಡಲು ಸಮರ್ಪಕ ಸಂಖ್ಯೆಯ ಬೋಧಕರಿರಬೇಕು. ವಾಸ್ತವದಲ್ಲಿ ರಾಜ್ಯದ ಎಲ್ಲಾ ವಿವಿಗಳಲ್ಲೂ ಈ ಸಂಖ್ಯೆಯಲ್ಲಿ ಗಣನೀಯ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರವು ಈ ಕೊರತೆ ನೀಗಿಸಲು ವಿವಿಗಳಲ್ಲಿರುವ ಈ ಸಂಖ್ಯೆಯ ಕೊರತೆ ನೀಗಿಸಬೇಕಾದ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ ನಮ್ಮ ವಿವಿಗಳು ಸ್ಪರ್ಧಾತ್ಮಕ ಯುಗದಲ್ಲಿ ಬಹು ಹಿಂದೆ ಬೀಳುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಎಂದು ತಿಳಿಸಿದರು.

ಪ್ರಸ್ತುತ ದೇಶದಲ್ಲಿ ಕಾಡುತ್ತಿರುವ ಲಾಕ್ ಡೌನ್ ಪರಿಣಾಮದಿಂದ ಆನ್ ಲೈನ್ ಶಿಕ್ಷಣ ಅಳವಡಿಸಿಕೊಳ್ಳಬೇಕೆಂಬ ಚರ್ಚೆ ನಡೆಯುತ್ತಿದೆ. ನಮ್ಮ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಕೆಲವನ್ನು ಹೊರತುಪಡಿಸಿದರೆ ಉಳಿದ ಸಂಸ್ಥೆಗಳು ಈ ಬದಲಾವಣೆಗೆ ಸಿದ್ಧತೆ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲ. ಸಾಮಾನ್ಯ ಪದವಿ ತರಗತಿ ವಿದ್ಯಾರ್ಥಿಗಳು ಈ ವಿಧಾನ ಅನುಸರಿಸಿ ಪಾಠಗಳನ್ನು ಕೇಳುವ ಕೌಶಲ್ಯ ಪಡೆದುಕೊಂಡಿಲ್ಲ. ಜೊತೆಗೆ ಅವರಲ್ಲಿ ಅದಕ್ಕೆ ಬೇಕಾದ ಸೌಕರ್ಯಗಳು ಇಲ್ಲ. ಆನ್ ಲೈನ್  ಮೂಲಕ ಪಾಠಗಳೆಲ್ಲವನ್ನೂ ಮಾಡಲಾಗುವುದಿಲ್ಲ. ಜೊತೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಇದರಿಂದ ಮಾಡಲಾಗದು. ಈ     ಬಗ್ಗೆ ಶಿಕ್ಷಣ ತಜ್ಞರ ಜೊತೆ ಗಂಭೀರ ಚರ್ಚೆ ಅವಶ್ಯಕ. ಎಲ್ಲಕಿಂತ ಮಿಗಿಲಾಗಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಮ್ಮ ಹಿರಿಯ ಅಧ್ಯಾಪಕ ವೃಂದ ಆನ್ ಲೈನ್ ಶಿಕ್ಷಣ ನೀಡುವ ತರಬೇತಿ ಪಡೆದಿರುವುದಿಲ್ಲ ಎಂದರು.

ವಿಶ್ವವಿದ್ಯಾಲಯಗಳಲ್ಲಿ ಏಕರೂಪತೆಯ ಶಿಕ್ಷಣವನ್ನು ಕೈಬಿಡಬೇಕೆಂದು ಆಗ್ರಹಿಸಿದರು.  ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೆಂಟರ್ಸ್ ಶಿಪ್ ಅಳವಡಿಕೆ ಉತ್ತಮ ವಿಧಾನವಾಗಿದೆ. ರಾಜ್ಯ ಸರ್ಕಾರ ಏಕರೂಪದ ಶಿಕ್ಷಣ ತರುವ ಆತುರದ ನಿರ್ಧಾರ ಕೈಬಿಡಬೇಕು. ಆನ್ ಲೈನ್ ಶಿಕ್ಷಣ ಮತ್ತು ಮೆಂಟರ್ ಶಿಪ್ ಅಳವಡಿಕೆ ಬಗ್ಗೆ ಶಿಕ್ಷಣ ತಜ್ಞರೊಡನೆ ಚರ್ಚಿಸಿ ತೀರ್ಮಾನಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ  ಪ್ರೊ. ವೆಂಕಟರಮಣ, ಪ್ರೋ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: