ಪ್ರಮುಖ ಸುದ್ದಿ

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ರೀಆಡಿಟ್; ಸಚಿವ ಎಸ್ ಟಿ ಸೋಮಶೇಖರ್ ಸೂಚನೆ

ರಾಜ್ಯ(ಬೆಂಗಳೂರು)ಜೂ.12:-  ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ನಡೆದಿರುವ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ರೀ ಆಡಿಟ್ ಮಾಡಬೇಕು. ಅಲ್ಲದೆ, ಇದರ ಲೆಕ್ಕ ಪರಿಶೋಧನೆ ಮಾಡಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಜೆ.ಪಿ.ನಗರದಲ್ಲಿರುವ ಸಂಸದರಾದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಸಹಕಾರ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಯಾವಾಗಲೂ ಶೇ. 14ಕ್ಕೆ ಸಾಲ ಕೊಡಬೇಕು. ಆದರೆ, ಈ ಪ್ರಕರಣದಲ್ಲಿ ಶೇ.18ರಷ್ಟು ಪಡೆಯುತ್ತಿದ್ದರೂ ಅಧಿಕಾರಿಗಳು ಗಮನಿಸಲಿಲ್ಲವೇ? ಕ್ರಮ ತೆಗೆದುಕೊಳ್ಳುವುದಕ್ಕಿಂತ ಮುಂಚಿತವಾಗಿ ಇದಕ್ಕೆ ಅವಕಾಶವನ್ನೇ ಕೊಡಬಾರದಿತ್ತು ಎಂದು ಸಚಿವರು ಸೂಚಿಸಿದರು. ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಕರಣ ದಾಖಲಿಸಬೇಕಾಗುತ್ತದೆ. ಇದರ ಹಿಂದೆ ಯಾರೇ ಇದ್ದರೂ ಅವರಿಗೆ ಯಾವುದೇ ರಿಯಾಯಿತಿ ಕೊಡುವುದು ಬೇಡ ಎಂದೂ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಈವರೆಗೆ ಅಧ್ಯಕ್ಷರ ಮೇಲೆ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ. ಹೀಗಾಗಿ ಅವರ ಮೇಲೂ ಸೇರಿದಂತೆ ಹೊಸ ಎಫ್ ಐ ಆರ್ ದಾಖಲಿಸಬೇಕು. ಸೆಕ್ಷನ್ 64 ಅಡಿ ತನಿಖೆ ಸಹ ನಡೆಯಲಿ. ಅಲ್ಲದೆ, ಎಷ್ಟು ವರ್ಷ ಅವಧಿಯ ರೀಆಡಿಟ್ ಆಗಬೇಕು ಎಂಬುದನ್ನು ಶೀಘ್ರ ನಿರ್ಧರಿಸಿ ವರದಿ ನೀಡಿ ಎಂದು ಸಚಿವರಾದ ಸೋಮಶೇಖರ್ ಹಾಗೂ ಸಂಸದರಾದ ತೇಜಸ್ವಿ ಸೂರ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಡಿಟ್ ಸೇರಿದಂತೆ ಸಮಗ್ರ ತನಿಖೆ ಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ  ಸೇರಿದಂತೆ ಇಲಾಖೆ ವತಿಯಿಂದ ಬೇಕಾದ ಸಹಕಾರ ಕೊಡಲಾಗುವುದು. ಎಲ್ಲ ರೀತಿಯ ಬೆಂಬಲವನ್ನು ನಾನು ಕೊಡಲಿದ್ದೇನೆ ಎಂದು ಸಚಿವರು ತಿಳಿಸಿದರು. ಅಲ್ಲದೆ, ಇಂಥ ಬೃಹತ್ ಪ್ರಮಾಣದ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಡಿವೈಎಸ್ಪಿ ಅಧಿಕಾರಿಗೆ ಸೂಚಿಸಿದರು.

ಇಲ್ಲಿ ಸಿಇಒ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮಾತ್ರ ಅವ್ಯವಹಾರ ಮಾಡಿದ್ದಾರೆ. ಅವರು ಸಹ ಈ ಬಗ್ಗೆ ಡಿಕ್ಲರೇಶನ್ ಕೊಟ್ಟಿದ್ದಾರೆ. ಹೀಗಾಗಿ ಇವರ ಮೇಲೆ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ಸಂಸದರಾದ ತೇಜಸ್ವಿ ಸೂರ್ಯ ಹೇಳಿದರು.

ಏನಿದು ಹಗರಣ?

ಈ ಸಹಕಾರ ಬ್ಯಾಂಕ್ ನಲ್ಲಿ 927 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದ್ದು, ಈ ಮೊತ್ತವನ್ನು ಕೇವಲ 27 ಮಂದಿ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ. ಹಾಗಾಗಿ ಈ ಬಗ್ಗೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ. ಒಟ್ಟಾರೆಯಾಗಿ 2 ಸಾವಿರ ಕೋಟಿಗೂ ಅಧಿಕ ವ್ಯವಹಾರಗಳು ಈ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ನಡೆದಿದೆ. ಪ್ರಸ್ತುತ ಆರ್ ಬಿ ಐ ಮಧ್ಯಪ್ರವೇಶ ಮಾಡಿದ್ದು, ಪರಿಶೀಲನೆ ನಡೆಸಿ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗ 35 ಸಾವಿರ ವರೆಗೆ ಮಾತ್ರ ವ್ಯವಹಾರ ಮಾಡಬಹುದು ಎಂದು ಆದೇಶ ನೀಡಿದೆ. ಅಲ್ಲದೆ, ವೈದ್ಯಕೀಯ ಸೇರಿ ತೀರಾ ತುರ್ತು ಪರಿಸ್ಥಿತಿ ಇದ್ದವರಿಗೆ 50 ಸಾವಿರ ರೂಪಾಯಿ ಹಾಗೂ ಹೃದಯ ಸಂಬಂಧಿ ರೋಗ ಇದ್ದವರಿಗೆ 1 ಲಕ್ಷ ಮತ್ತು ತೀರಾ ಅನಾರೋಗ್ಯದ ಸಂದರ್ಭದಲ್ಲಿ 5 ಲಕ್ಷ ರೂಪಾಯಿವರೆಗೆ ಠೇವಣಿ ಹಿಂಪಡೆಯಲು ಅವಕಾಶ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಹೂಡಿಕೆದಾರರ ವಿಶ್ವಾಸ ಪಡೆಯಿರಿ

ಯಾವುದೇ ಕಾರಣಕ್ಕೂ ಹೂಡಿಕೆದಾರರು ಗಾಬರಿಯಾಗಬಾರದು. ಅವರೊಂದಿಗೆ ಸಹಕಾರ ಇಲಾಖೆ ಇದೆ ಎಂಬುದನ್ನು ಮನದಟ್ಟು ಮಾಡಿ. ಸಭೆ ಏರ್ಪಡಿಸಿದರೆ ನಾನು ಸಹ ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡುತ್ತೇನೆ. ಒಟ್ಟಿನಲ್ಲಿ ಬ್ಯಾಂಕ್ ಉಳಿಯಬೇಕು ಎಂದು ಸಚಿವರು ಸೂಚಿಸಿದರು. (ಎಸ್.ಎಚ್)

Leave a Reply

comments

Related Articles

error: