ಮೈಸೂರು

ಈಗಾಗಲೇ ಆದೇಶ ಹೊರಬಿದ್ದಿದೆ ಎಂದು ನಾನು ಎಲ್ಲಿಯೂ ತಿಳಿಸಿಲ್ಲ : ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ

ಮೈಸೂರು,ಜೂ.13:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರಾದ   ಎಂ. ಲಕ್ಷ್ಮಣ ಅವರು ಒಬ್ಬ ಬುದ್ಧಿಜೀವಿ, ಅವರು ವಿಚಾರಗಳನ್ನು ಅಧ್ಯಯನ ಮಾಡಿ ಮಾತನಾಡುವವರು, ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದರೆ ಇಂದು ಮೈಸೂರಿನ ಕುರುಬರಹಳ್ಳಿ ಸರ್ವೆ ನಂ. 04 ಕ್ಕೆ ಸಂಬಂಧಿಸಿದಂತೆ ಸುದ್ದಿ ಗೋಷ್ಠಿ ನಡೆಸಿ ಹೇಳಿರುವ ಮಾತುಗಳು ಆಶ್ಚರ್ಯಕರವಾದಂತದ್ದು. ನನ್ನ ಕ್ಷೇತ್ರದ ಮತದಾರರ ಋಣ ತೀರಿಸುವಂತದ್ದು ನನ್ನ ಪ್ರಯತ್ನವಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.

ಈ ಕುರುಇತು ಮಾಧ್ಯಮ ಹೇಳಿಕೆ ನೀಡಿರುವ ಅವರು ಇದಕ್ಕಾಗಿ ಸರ್ವೆ ನಂ.04 ರಲ್ಲಿ ಬರುವ ಸಿದ್ದಾರ್ಥ ಬಡಾವಣೆ , ಆಲನಹಳ್ಳಿ ಬಡಾವಣೆ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆ ಮತ್ತು ಇಂಕಮ್ ಟ್ಯಾಕ್ಸ್ ಬಡಾವಣೆ ಇವೆಲ್ಲವೂ ಸರ್ಕಾರವೇ ರಚನೆ ಮಾಡಿರುವಂತಹ ಮತ್ತು ಅನುಮೋದನೆ ಮಾಡಿರುವಂತಹ ಬಡಾವಣೆಗಳಾಗಿದೆ. ಆದರೆ ಸರ್ವೆ ನಂ.04 ನ್ನು ‘ಬಿ’ ಖರಾಬ್ ಎಂದು ಆದೇಶ ಹೊರಡಿಸಿರುವಾಗ ಸರ್ಕಾರವೇ ರಚನೆ ಮಾಡಿರುವ ಈ 5 ಬಡಾವಣೆಗಳಲ್ಲಿರುವ ಪ್ರದೇಶವನ್ನು ಬಿಟ್ಟು ಘೋಷಿಸಬೇಕಾಗಿತ್ತು. ಆದರೆ ಅದು ತಪ್ಪಾಗಿರುದು ಎಲ್ಲರಿಗೂ ಗೊತ್ತಿರುವಂತಹ ವಿಷಯವಾಗಿದೆ.  ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ, ಸರ್ಕಾರವು  ಕ್ಯಾಬಿನೇಟ್  ನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಿ ಅಭಿವೃದ್ಧಿ ಪಡಿಸಲ್ಪಟ್ಟ ಬಡಾವಣೆಗಳ ಒಟ್ಟು 354.29 ½ ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ತೆಗೆದುಕೊಂಡಿರುವ ನಿರ್ಣಯ ಈ ತಪ್ಪನ್ನು ಸರಿಪಡಿಸುವಂತಹ ಒಂದು ಕ್ರಮವಾಗಿದೆ. ಆದರೆ ಅಂದಿನ ಅಡ್ವೋಕೇಟ್ ಜನರಲ್ ಅವರು ಸದರಿ ಕ್ಯಾಬಿನೆಟ್ ನಿರ್ಣಯದ ನಂತರದಲ್ಲೂ ಕರ್ನಾಟಕ ಉಚ್ಛ ನ್ಯಾಯಾಲಯದ ಗಮನಕ್ಕೆ ತಂದು ತಡೆಯಾಜ್ಞೆಯ ಮಾರ್ಪಾಡಿನೊಂದಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಿ ಅಭಿವೃದ್ಧಿ ಪಡಿಸಲ್ಪಟ್ಟ ಬಡಾವಣೆಗಳ ಪ್ರದೇಶವನ್ನು ಉಚಿತವಾಗಿ ನೀಡಲು ಆದೇಶವನ್ನು ಹೊರಡಿಸಬಹುದೆಂದು ತಿಳಿಸಿದ್ದರು.   ಆದರೆ 2 ವರ್ಷಗಳ ಕಾಲದಿಂದ ಈ ಕೆಲಸ ನಡೆದಿರಲಿಲ್ಲ ಎಂದು ಎಲ್ಲರಿಗೂ ಗೊತ್ತು , ಆದರೆ ಈಗ ಅದನ್ನು ಸರಿಪಡಿಸಿ ಆದೇಶವನ್ನು ಹೊರಡಿಸಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುವಂತೆ  ಮುಖ್ಯಮಂತ್ರಿಗಳು ಆದೇಶಿಸಿರುತ್ತಾರೆ. ಈಗಾಗಲೇ ಆದೇಶ ಹೊರಬಿದ್ದಿದೆ ಎಂದು ನಾನು ಎಲ್ಲಿಯೂ ತಿಳಿಸಿಲ್ಲ. ಆದೇಶವನ್ನು ಹೊರಡಿಸಲು  ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ, ಜೂನ್ ಅಂತ್ಯಕ್ಕೆ ಈ ಆದೇಶದ ಪ್ರತಿಯನ್ನು ನೊಂದ ಜನಕ್ಕೆ ಕಂದಾಯ ಸಚಿವರು ನೀಡಲಿದ್ದಾರೆ ಎಂದು ಮಾತ್ರ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ನೀಡಿರುವ ಹೇಳಿಕೆಯ ಹಿಂದೆ ಯಾವುದೇ ಕ್ರಿಮಿನಲ್ ವಿಚಾರ ಇರುವುದಿಲ್ಲ. ಇಂದಿನ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ನನ್ನ ಕ್ಷೇತ್ರದ ಸಾವಿರಾರು ಕುಟುಂಬದ ಸಮಸ್ಯೆಯನ್ನು ಪರಿಹಾರ ಮಾಡಿದ್ದಾರೆ. ಇದಲ್ಲದೇ ಈ ನನ್ನ ಪ್ರಯತ್ನದ ಹಿಂದೆ ನನ್ನದು ಅಥವಾ ನನ್ನ ತಮ್ಮನ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಎಂದು ಹೇಳಿರುವುದು ಆಶ್ಚರ್ಯಕರ, ಇದಕ್ಕೆ ಸಂಬಂಧಿಸಿದಂತೆ  ಲಕ್ಷ್ಮಣ್ ಅವರಿಗೆ ಒಂದು ವೈಯುಕ್ತಿಕ ಪತ್ರವನ್ನು ಬರೆಯುತ್ತಿದ್ದೇನೆ. ಅವರ ಹೇಳಿಕೆಯನ್ನು ಸಾಬೀತು ಪಡಿಸಿದಲ್ಲಿ ನಾನು ರಾಜಕೀಯ ನಿವೃತ್ತಿಯನ್ನು ಹೊಂದುತ್ತೇನೆ. ಆದರೆ ಅವರು ಹೇಳಿದ್ದು ಸುಳ್ಳಾದಲ್ಲಿ ಅದು ಸುಳ್ಳು ಎಂದು ಸಾರ್ವಜನಿಕರಿಗೆ ತಿಳಿಸಿದರೆ ಸಾಕು.

ಈಗ ಕುರುಬಾರಳ್ಳಿ ಸರ್ವೆ ನಂಬರ್ ನಲ್ಲಿರುವಂತಹ 1,500 ಎಕರೆ ಪ್ರದೇಶಕ್ಕೆ ಯಾವುದೇ ಆದೇಶ ಆಗಿದೆ ಎಂದು ನಾನು ಎಲ್ಲಿಯೂ ತಿಳಿಸಿಲ್ಲ. ಈ ಪೈಕಿ ಕೇವಲ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಿ ಅಭಿವೃದ್ಧಿ ಪಡಿಸಲ್ಪಟ್ಟ ಬಡಾವಣೆಗಳ ಪ್ರದೇಶವನ್ನು ಮಾತ್ರ ‘ಬಿ’ ಖರಾಬ್ ಶೀರ್ಷಿಕೆಯಿಂದ ವಿಹಿತಗೊಳಿಸಿ ಕಂದಾಯ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ 354.29 ½  ಎಕರೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಇದು ಅಧಿಕೃತವಾಗಿ ಸುಮಾರು 20 ವರ್ಷಗಳ ಕಾಲದ ಹಿಂದೆ ಸರ್ಕಾರದಿಂದ ನಿವೇಶನ ಪಡೆದಿರುವ ಬಡ ಮತ್ತು ಮಧ್ಯಮ ವರ್ಗದ ಜನರ ನೋವಿಗಾಗಿ ಕಂಡುಕೊಂಡಿರುವ ಪರಿಹಾರ ಮಾತ್ರ.

ಸಾರ್ವಜನಿಕ ಚರ್ಚೆಗಾಗಿ ಆಹ್ವಾನ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ, ಮುಂದಿನ ದಿನಾಂಕವನ್ನು ಕೂಡಾ ತಿಳಿಸಲಿದ್ದೇನೆ. ದಯಮಾಡಿ ಇದಕ್ಕೆ ಸಹಕರಿಸಿದ ಹಿಂದಿನ ಮುಖ್ಯಮಂತ್ರಿಗಳಾದ   ಸಿದ್ದರಾಮಯ್ಯನವರಿಗೂ ಕೂಡಾ ನನ್ನ ಧನ್ಯವಾದ ಅರ್ಪಿಸಿದ್ದೇನೆ. ವಕ್ತಾರರಾದ   ಲಕ್ಷ್ಮಣ್ ಅವರಲ್ಲೂ ಕೂಡಾ ಕೇಳುವುದು ಇಷ್ಟೇ ನೊಂದ ಸಾವಿರಾರು ಕುಟುಂಬಗಳಿಗೆ, 8 ವರ್ಷಗಳ ಕಾಲದಿಂದ ಆಗಿರುವ ಸಮಸ್ಯೆಯನ್ನು ಪರಿಹರಿಸಲು ನೀವು ಕೂಡ ಸಹಕರಿಸಿ, ನಂತರ ಯಾವುದೇ ತಪ್ಪು ಇದ್ದರೂ ಅಥವಾ ಯಾರದಾದರೂ ವೈಯುಕ್ತಿಕ ಆಸಕ್ತಿ ಇದ್ದಲ್ಲಿ ದಾಖಲೆಗಳ ಸಮೇತ ಸಾರ್ವಜನಿಕರಿಗೆ ನೀಡುವುದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: