ಮೈಸೂರು

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರೆ ಕೃಷಿ ಸಂಸ್ಕೃತಿ ಸಂಪೂರ್ಣ ನಾಶವಾಗತ್ತೆ : ಬಡಗಲಪುರ ನಾಗೇಂದ್ರ

ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು,ಜೂ.13:- ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ವಿರೋಧಿಸಿ ಇಂದು ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾ ನ್ಯಾಯಾಲಯದ ಎದುರಿರುವ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದ ರೈತರು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದು ಬೇಡ, ರೈತರ ಹಿತ ಕಾಪಾಡಿ ಎಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆ ರೀತಿ ತಿದ್ದುಪಡಿ ತಂದರೆ ರೈತರ ಕುಲವೇ ನಾಶವಾಗತ್ತೆ. ನಮ್ಮಲ್ಲಿನ ರೈತರೇನಿದ್ದಾರೆ ಅವರೆಲ್ಲ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಕೃಷಿ ಸಂಸ್ಕೃತಿ ಸಂಪೂರ್ಣ ನಾಶವಾಗತ್ತೆ, ಆಹಾರ ಸಂಸ್ಕೃತಿ ಸಂಪೂರ್ಣ ನಾಶವಾಗತ್ತೆ. ಆಹಾರ ಪದ್ಧತಿ ಬೇರೆ ರೂಪಕ್ಕೆ ಬರತ್ತೆ. ಪರಿಸರಕ್ಕೆ ಧಕ್ಕೆ ಬರುತ್ತದೆ. ಯಾಕೆ ಕಾರಣ ಅಂದರೆ ಭಾರತ ದೇಶದಲ್ಲಿ ಬಹುಸಂಖ್ಯಾತರು ರೈತರು. ಸಣ್ಣ ಹಿಡುವಳಿ ದಾರರೇ ವೈವಿಧ್ಯವಾದಂತಹ ಬೆಳೆಗಳನ್ನು ಬೆಳೆದು ದವಸ ಧಾನ್ಯವನ್ನು, ಹಣ್ಣು-ಹಂಪಲುಗಳನ್ನು ತರಕಾರಿಗಳನ್ನು ಬೆಳೆದು ಸಮಾಜಕ್ಕೆ ಕೊಡುತ್ತಾರೆ. ಆ ತುಂಡುಭೂಮಿಯನ್ನು ನಾಶ ಮಾಡಿ ಸಾವಿರಾರು ಎಕರೆ, ಲಕ್ಷಾಂತರ ಎಕರೆ ಕಂಪನಿ ಬೇಸಾಯಕ್ಕೆ ಒತ್ತು ಕೊಟ್ಟರೆ ಅದು ಮೊದಲನೆಯದಾಗಿ ಹೊಡೆತ ಬೀಳೋದು ನಮ್ಮ ಆಹಾರ ಸಂಸ್ಕೃತಿಗೆ, ಎರಡನೆಯದು ಜೆನೆಟಿಕಲಿ ಮಾಡಿಫೈಡ್ ಹೇಳ್ತೇವೆ ಕುಲಾಂತರಿ ಬೀಜಗಳನ್ನು ಪ್ರಯೋಗ ಮಾಡ್ತಾರೆ, ಬೆಳೆಯುತ್ತಾರೆ.   ಅದರಿಂದ ನಮ್ಮ ಆಹಾರ ಸಂಸ್ಕೃತಿ ನಾಶವಾಗತ್ತೆ. ಮತ್ತೆ ಭೂಮಿ ಕಳೆದುಕೊಂಡವರಿಗೆ ಉದ್ಯೋಗವಿಲ್ಲದೇ ಅವರು ವಲಸೆ ಹೋಗಬೇಕಾಗತ್ತೆ. ದಾರಿದ್ರ್ಯ ಉಂಟಾಗಲಿದೆ. ಆಹಾರ ಪದ್ಧತಿ ನಾಶವಾಗತ್ತೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ರೈತರು, ರೈತ ಮುಖಂಡರು  ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: