ಕರ್ನಾಟಕಪ್ರಮುಖ ಸುದ್ದಿ

ಚುನಾವಣೆಗೆ ಹಣ ಪಡೆಯಲು ಜನಾರ್ದನ ರೆಡ್ಡಿ ಕೇಸ್ ಖುಲಾಸೆ ಮಾಡಲಾಗಿದೆ : ಎಚ್‍ಡಿಕೆ ಆರೋಪ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲಿನ ಪ್ರಕರಣಗಳನ್ನು ರದ್ದು ಮಾಡಿರುವುದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಕಾರಣಕ್ಕಾಗಿ ರೆಡ್ಡಿ ವಿರುದ್ಧದ ಎಲ್ಲಾ ಕೇಸ್‍ಗಳೂ ಖುಲಾಸೆಯಾಗುತ್ತಿದ್ದು, ಈ ಸಂಬಂಧ 500 ಕೋಟಿ ರುಪಾಯಿ ಒಪ್ಪಂದವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಎಚ್‍ಡಿಕೆ, ಬರಪರಿಹಾರಕ್ಕೆ ಕೇವಲ 450 ಕೋಟಿ ರುಪಾಯಿಗಳನ್ನು ಕೇಂದ್ರ ಬಿಡುಗಡೆ ಮಾಡಿದೆ. ಹಾಗಾದರೆ ರಾಜ್ಯದಲ್ಲಿ ಸಂಕಷ್ಟ ಸಮಯದಲ್ಲಿ ಜನ ಭಿಕ್ಷೆ ಬೇಡಬೇಕಾ? ಎಂದು ಪ್ರಶ್ನಿಸಿದ್ದಾರೆ.

ರೈತರ ಸಾಲಮನ್ನಾ ಖಚಿತ: ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ಹೈಕಮಾಂಡ್​ಗೆ ಕಳುಹಿಸಿದ ದುಡ್ಡಲ್ಲೇ ರೈತರ ಸಾಲಮನ್ನ ಮಾಡಬಹುದಿತ್ತು. ರಾಜ್ಯದಲ್ಲಿ ಸುಮಾರು 60,000 ಕೋಟಿ ರು.ಬೆಳೆ ನಷ್ಟವಾಗಿದೆ. ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಟ್ರಾಕ್ಟರ್, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್​ಗಳ ರೈತರ ಸಾಲ ಮನ್ನಾ ಮಾಡುತ್ತೇನೆ. ಈ ಮೂಲಕ ರೈತರನ್ನು ಕಾಪಾಡುತ್ತೇನೆ ಎಂದಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅನ್ಯಾಯ ಮಾಡಿವೆ. ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ಹೈಕಮಾಂಡ್​ಗೆ ಕಪ್ಪದ ರೂಪದಲ್ಲಿ ಕಳುಹಿಸಿರುವ ಹಣವನ್ನೇ ರೈತರ ಸಾಲ ಮನ್ನಾ ಮಾಡಲು ಬಳಕೆ ಮಾಡಬಹುದಿತ್ತು. ಒಬ್ಬರು ಡೈರಿ, ಮತ್ತೊಬ್ಬರು ಸಿ.ಡಿ ಹಗರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗಣಿಸುತ್ತಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಎಚ್.ಡಿ.ರೇವಣ್ಣ, ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ, ಜಫ್ರುಲ್ಲಾ ಖಾನ್, ಶಾಸಕ ವೈ.ಎಸ್.ವಿ. ದತ್ತ, ಎಂ.ಸಿ.ನಾಣಯ್ಯ, ಮಾಜಿ ಶಾಸಕ ಬಂಡೆಪ್ಪ ಕಾಶಂಪುರ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಭಾಗವಹಿಸಿದ್ದರು.

ಉಪಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಬೆಂಬಲ ಇಲ್ಲ

ಇನ್ನು ಗುಂಡ್ಲು ಪೇಟೆ ನಂಜನಗೂಡು ಉಪ ಚುನಾವಣೆಗೆ ಬೇರೆ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಹಣವನ್ನ ಲೂಟಿ ಮಾಡಿ ಪಾಪದ ಹಣವನ್ನ ಉಪಚುನಾವಣೆಯಲ್ಲಿ ಸುರಿಯುತ್ತಿದ್ದಾರೆ ಎಂದು ಎರಡೂ ಕ್ಷೇತ್ರದ ಕಾರ್ಯಕರ್ತರು ತಿಳಿಸಿದರು. ಹೀಗಾಗಿ ಜೆಡಿಎಸ್ ನಿಂದ ಅಭ್ಯರ್ಥಿ ಹಾಕಲಿಲ್ಲ ಎಂದು ವಾಗ್ದಾಳಿ ನಡೆಸಿದರು.

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: