ಕರ್ನಾಟಕಪ್ರಮುಖ ಸುದ್ದಿ

ಸದ್ಯದಲ್ಲೇ 1,300 ಸಂಚಾರಿ ಪೊಲೀಸರ ನೇಮಕ : ಗೃಹ ಸಚಿವ ಪರಮೇಶ್ವರ್

ಬೆಂಗಳೂರು : ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ನಿವಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಶೀಘ್ರದಲ್ಲೇ 1300 ಸಂಚಾರಿ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಆಡಳಿತ ಪಕ್ಷದ ಸದಸ್ಯೆ ನಟಿ ಡಾ.ಜಯಮಾಲಾ ಅವರ ಪ್ರಶ್ನೆಗೆ ಗುರುವಾರ ಉತ್ತರಿಸುತ್ತಿದ್ದ ಅವರು, ಸಂಚಾರ ದಟ್ಟಣೆ ಕುರಿತಂತೆ ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ದೆಹಲಿಯಲ್ಲಿ 85 ಲಕ್ಷ ಚೆನ್ನೈ 44 ಲಕ್ಷ, ಕೋಲ್ಕತಾದಲ್ಲಿ 28 ಲಕ್ಷ ವಾಹನಗಳು ನೋಂದಣಿಯಾಗುತ್ತಿವೆ. ನಗದಲ್ಲೂ ಸುಮಾರು 65 ಲಕ್ಷ ವಾಹನಗಳು ನೋಂದಣಿಯಾಗುತ್ತಿದ್ದು, ಸಂಚಾರಿ ಪೊಲೀಸರಿಗೆ ಸಂಚಾರ ದಟ್ಟಣೆ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ ಎಂದರು.

2003ರಲ್ಲಿ ನಗರದಲ್ಲಿ 19 ಲಕ್ಷ ವಾಹನಗಳಿದ್ದವು. ಇದೀಗ 66 ಲಕ್ಷ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಮೇಲ್ಸೇತುವೆ, ರಸ್ತೆ ಅಗಲೀಕರಣದಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಮಿತಿ ಮೀರಿದ ವಾಹನಗಳಿಂದ ಪ್ರತಿ ದಿನದಟ್ಟಣೆ ಎದುರಿಸುವಂತಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರನ್ನು ಹಿಡಿಯುವ ಕೆಲಸ ಟ್ರಾಫಿಕ್ ಪೊಲೀಸರ ಕೆಲಸವಲ್ಲ. ನಗರದ 162 ಜಂಕ್ಷನ್ ಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹಾಗಾಗಿ ರಸ್ತೆ ನಿಯಮಗಳನ್ನು ಉಲ್ಲಂಘಿಸವವರಿದೆ ದಂಡ ವಿಧಿಸಲಾಗುತ್ತದೆ.

2016-17ನೇ ವರ್ಷದಲ್ಲಿ 91 ಲಕ್ಷ ಪ್ರಕರಣಗಳು ದಾಖಲಾಗಿವೆ. ರೂ.61 ಕೋಟಿಯನ್ನು ಸಂಗ್ರಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 3400 ಸಂಚಾರಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, 5200 ಜನರು ಮಂಜೂರಾತಿಯ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 1300 ಮಂದಿಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

(ಎನ್‍.ಬಿ.ಎನ್)

Leave a Reply

comments

Related Articles

error: