ಪ್ರಮುಖ ಸುದ್ದಿ

ಅಧಿಕ ವಿದ್ಯುತ್ ಅಭಿವೃದ್ಧಿ ಶುಲ್ಕ : ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ

ರಾಜ್ಯ( ಮಡಿಕೇರಿ) ಜೂ.17 :- ಬಡಾವಣೆಗಳಿಗೆ ವಿದ್ಯುತ್ ಸಂಪರ್ಕದ ಸಂದರ್ಭ ವಿಧಿಸಲಾಗುವ ಅಭಿವೃದ್ಧಿ ಶುಲ್ಕವು ಬಡಾವಣೆ ರಹಿತ ವಿದ್ಯುತ್ ಗ್ರಾಹಕರಿಗೆ ಅನ್ವಯಿಸುವುದಿಲ್ಲವೆಂದು ಕರ್ಣಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಸ್ಪಷ್ಟಪಡಿಸಿದೆ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಸೆಸ್ಕ್ ಅಧಿಕಾರಿಗಳು ವಿಧಿಸುತ್ತಿದ್ದ ಶುಲ್ಕ ಅಸಮರ್ಥನೀಯ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ಮಡಿಕೇರಿ ವಿದ್ಯುತ್ ಗ್ರಾಹಕರ ಹೋರಾಟ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ.ಯಾಲದಾಳು ಮನೋಜ್ ಬೋಪಯ್ಯ ಅವರು ಸೆಸ್ಕ್ ವ್ಯಾಪ್ತಿಯಲ್ಲಿ ಬರುವ ಮನೆ, ವಾಣಿಜ್ಯ, ಕೈಗಾರಿಕೆ ಹಾಗೂ ಇನ್ನಿತರ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಬಡಾವಣೆಗಳಿಗೆ ಅಳವಡಿಸುವ ಅಭಿವೃದ್ಧಿ ಶುಲ್ಕವನ್ನೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಬಡಾವಣೆ ರಹಿತರಿಗು ವಿಧಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಹಲವು ಬಾರಿ ಸೆಸ್ಕ್ ಕಾರ್ಯಪಾಲಕ ಅಭಿಯಂತರರು, ವ್ಯವಸ್ಥಾಪಕ ನಿರ್ದೇಶಕರು, ಅಧೀಕ್ಷಕ ಅಭಿಯಂತರರು ಮುಂತಾದವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ದೂರು ಸಲ್ಲಿಸಿ, ಅಭಿವೃದ್ಧಿ ಶುಲ್ಕ ನಿಗದಿಯಲ್ಲಿನ ಗೊಂದಲವನ್ನು ನಿವಾರಿಸುವಂತೆ ಕೋರಿತ್ತು ಎಂದರು.
ಆಯೋಗವು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ತಾವು ಪಡೆಯುತ್ತಿರುವ ಅಭಿವೃದ್ಧಿ ಶುಲ್ಕವು ಕರ್ನಾಟಕ ಇಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್(ರಿಕವರಿ ಆಫ್ ಎಕ್ಸಪೆಂಡಿಚರ್ ಫಾರ್ ಸಪ್ಲೈ ಆಫ್ ಇಲೆಕ್ಟ್ರಿಸಿಟಿ(10ನೇ ಅಮೆಂಡ್‍ಮೆಂಟ್) ರೆಗ್ಯುಲೇಷನ್ಸ್, 2020) ರ ನಿಯಮಗಳ ಅಡಿಯಲ್ಲಿ ವಸತಿ ಬಡಾವಣೆಗಳಲ್ಲಿ ವಿದ್ಯುತ್ ಮೂಲಭೂತ ಸೌಕರ್ಯ ಕಲ್ಪಿಸದ ನಿವೇಶನಗಳಿಗೆ ವಿದ್ಯುತ್ ಪಡೆಯಲು ಮಾತ್ರ ಅನ್ವಯಿಸಿದ್ದು, ಇತರೆ ವಿದ್ಯುತ್ ಸಂಪರ್ಕಗಳನ್ನು ಪಡೆಯಲು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದರು.
ಈ ಆದೇಶವನ್ನು ಕೊಡಗು ಜಿಲ್ಲೆಯ ಕಾರ್ಯಪಾಲಕ ಅಭಿಯಂತರರಿಗೆ ನೀಡಿದ್ದರು, ತಮಗೆ ಅಧಿಕೃತವಾಗಿ ಆದೇಶ ಬರುವವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಮನೋಜ್ ಬೋಪಯ್ಯ ಅವರು, ಆಯೋಗದ ಮಾರ್ಗಸೂಚಿಯ ಅನ್ವಯ ವಿದ್ಯುತ್ ಅಭಿವೃದ್ಧಿ ಶುಲ್ಕ ಪಡೆಯದಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಸಾಮಾನ್ಯವಾಗಿ ಗ್ರಾಹಕರು ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭ 30 ಮೀಟರ್ ಅಂತರದಲ್ಲಿ 3 ಕೆ.ವಿ. ವರೆಗಿನ ಮಾರ್ಗಕ್ಕೆ ಯಾವುದೇ ಅಭಿವೃದ್ಧಿ ಶುಲ್ಕ ಪಾವತಿಸಬೇಕಾಗಿಲ್ಲ. ಆ ನಂತರದ ಕೆ.ವಿ.ಗಳಿಗೆ ತಲಾ 650 ರೂ.ಗಳನ್ನು ಪಾವತಿಸಬೇಕಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಇಲ್ಲಿನ ಕಾರ್ಯಪಾಲಕ ಅಭಿಯಂತರರು ಪ್ರತಿ ಕೆ.ವಿ.ಗೆ 6500 ರೂ.ಗಳಷ್ಟು ಅಭಿವೃದ್ಧಿ ಶುಲ್ಕವನ್ನು ಪಡೆಯುತ್ತಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ಮನೋಜ್ ಬೋಪಯ್ಯ ಪ್ರತಿಪಾದಿಸಿದರು.
ಮುಂದಿನ ದಿನಗಳಲ್ಲಿ ಗ್ರಾಹಕರು ವಿದ್ಯುತ್ ಸಂಪರ್ಕ ಪಡೆಯಲು ಆಯೋಗದ ಮಾರ್ಗಸೂಚಿಯ ಅನ್ವಯವೆ ಶುಲ್ಕ ಪಾವತಿಸಬೇಕೆಂದು ಮನವಿ ಮಾಡಿದ ಅವರು, ಈಗಾಗಲೆ ಹೆಚ್ಚುವರಿ ಶುಲ್ಕ ಪಾವತಿಸಿದ ಗ್ರಾಹಕರು, ಗ್ರಾಹಕರ ವೇದಿಕೆ ಮೂಲಕ ಪ್ರಕರಣವನ್ನು ದಾಖಲಿಸಿದ್ದಾರೆ. ಆಯೋಗದ ಆದೇಶ ಹೋರಾಟ ಸಮಿತಿಯ ಹೋರಾಟಕ್ಕೆ ಸಂದ ಜಯವೆಂದು ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಕೊತ್ತೋಳಿ ರಕ್ಷಿತ್ ಅಪ್ಪಯ್ಯ, ಸದಸ್ಯರಾದ ಎಂ.ಕೆ.ಅರುಣ್ ಕುಮಾರ್, ಎಸ್.ಇ. ಹೇಮಂತ್, ಎನ್.ಗೋಪಾಲ ಕೃಷ್ಣ ಹಾಗೂ ರಾಜೇಶ್ ಕುಮಾರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: