ಪ್ರಮುಖ ಸುದ್ದಿ

ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಎಸ್‍ಡಿಪಿಐ ತೀವ್ರ ವಿರೋಧ

ರಾಜ್ಯ( ಮಡಿಕೇರಿ) ಜೂ.19 :- ಕೃಷಿಕರಲ್ಲದವರಿಗೂ ಸ್ಥಳೀಯ ಕೃಷಿ ಜಮೀನಿನ ಖರೀದಿಗೆ ಅವಕಾಶ ನೀಡಲು ಅನುಕೂಲವಾಗುವಂತೆ 1961 ರ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದಿಂದ ಇಲ್ಲಿನ ಸಣ್ಣ ಮತ್ತು ಮಧ್ಯಮ ಕೃಷಿಕರು ತಮ್ಮ ಕೃಷಿ ಜಮೀನುಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬಕ್ಕರ್ ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಾವೋಸ್‍ನಲ್ಲಿ ವಾಣಿಜ್ಯೋದ್ಯಮಿಗಳ ಸಭೆಯಲ್ಲಿ ಪಾಲ್ಗೊಂಡ ಹಂತದಲ್ಲಿ, ವಿದೇಶಿ ಬಂಡವಾಳ ಹೂಡಿಕೆದಾರರು ತಮ್ಮ ಉದ್ಯಮದ ಆರಂಭಕ್ಕೆ ನಿಮ್ಮಲ್ಲಿನ ಭೂ ಕಾಯ್ದೆಗಳು ತೊಡಕಾಗಿರುವುದನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲಕ ಕೃಷಿಕರಲ್ಲದವರಿಗೂ ಇಲ್ಲಿನ ಕೃಷಿ ಜಮೀನು ಖರೀದಿಗೆ ಅವಕಾಶ ಒದಗಿಸಲು ಸರ್ಕಾರ ಮುಂದಾಗುತ್ತಿದೆ ಎಂದು ಆರೋಪಿಸಿದರು. ಕಾಯ್ದೆ ವಿರುದ್ಧ ಪಕ್ಷ ರಾಜ್ಯಾದ್ಯಂತ ಹೋರಾಟವನ್ನು ರೂಪಿಸಲಿದೆ ಎಂದು ತಿಳಿಸಿದರು.
ರಾಜ್ಯದ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಗಳ ಬಗ್ಗೆ ಕೊಡಗಿನ ಶಾಸಕರುಗಳು ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕೆಂದು ಇದೇ ಸಂದರ್ಭ ಆಗ್ರಹಿಸಿದರು.
ಕೊರೊನಾದಿಂದ ಇಡೀ ರಾಷ್ಟ್ರ ಸಂಕಷ್ಟಕ್ಕೆ ಸಿಲುಕಿರುವ ಹಂತದಲ್ಲಿ, ಗಾಯದ ಮೇಲೆ ಬರೆ ಎಳೆಯುವಂತೆ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ಸರ್ಕಾರದ ಕ್ರಮದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅಬೂಬಕ್ಕರ್ ತಿಳಿಸಿದರು.
ಕೊರೊನಾ ನಿಯಂತ್ರಣಕ್ಕಾಗಿ ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಧಿಸಿರುವ ಲಾಕ್‍ಡೌನ್‍ನಿಂದ ರೈತಾಪಿ ವರ್ಗ, ಕೃಷಿ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಇದೀಗ ಪೆಟ್ರೋಲ್ ಉತ್ಪನ್ನಗಳ ಬೆಲೆ ಹೆಚ್ಚಳ ಪರೋಕ್ಷವಾಗಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದು, ಕೇಂದ್ರದ ಈ ನಿರ್ಧಾರ ದೇಶವನ್ನು ಮತ್ತಷ್ಟು ಸಂಕಷ್ಟದ ಪರಿಸ್ಥಿತಿಗೆ ತಳ್ಳುತ್ತಿರುವುದಾಗಿ ಆರೋಪಿಸಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಛಾ ತೈಲದ ಬೆಲೆ 108 ಡಾಲರ್ ಇತ್ತಾದರೆ, ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 65 ರೂ.ಗಳಷ್ಟಿತ್ತು. ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ಕಳೆದ 2019ನೇ ಸಾಲಿನಲ್ಲಿ ಪ್ರತಿ ಬ್ಯಾರಲ್ ತೈಲ ಬೆಲೆ 65 ಡಾಲರ್‍ಗೆ ಕುಸಿದ ಸಂದರ್ಭದಲ್ಲಿಯೂ ಪ್ರತಿ ಲೀಟರ್ ಪೆಟ್ರೋಲ್ ದರ 77 ರೂ.ಗಳಷ್ಟಿತ್ತು. ಇದೇ 2020ನೇ ಸಾಲಿನಲ್ಲಿ ಬ್ಯಾರಲ್ ತೈಲ ಬೆಲೆ 37 ಡಾಲರ್‍ಗಳ ಪಾತಾಳಕ್ಕೆ ಕುಸಿದೆದೆಯಾದರು, ಇಲ್ಲಿ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸುವ ಮೂಲಕ ಕೇಂದ್ರ ಜನವಿರೋಧಿಯಾಗಿ ನಡೆದುಕೊಂಡಿದೆ ಎಂದು ಟೀಕಿಸಿದರು.
ಅಂತರಾಷ್ಟ್ರೀಯ ಮಟ್ಟದ ತೈಲ ಬೆಲೆಯ ಅನ್ವಯ ಪ್ರತಿ ಲೀಟರ್ ಪೆಟ್ರೋಲ್ ದರ ಕೇವಲ 25.32 ರೂ.ಗಳಷ್ಟಿದೆ. ಆದರೆ, ಇದರ ಮೇಲೆ ಕೇಂದ್ರ ಸರ್ಕಾರ 33 ರೂ. ತೆರಿಗೆ, ರಾಜ್ಯ ಸರ್ಕಾರ 16.50 ರೂ. ತೆರಿಗೆ ನಿಗದಿ ಮಾಡಿದೆ. ಇದರೊಂದಿಗೆ ಡೀಲರ್ ಕಮಿಷನ್ 3.70 ರೂ. ಸೇರಿದರೆ ಸರಿ ಸುಮಾರು ಪ್ರತಿ ಲೀಟರ್ ಪೆಟ್ರೋಲ್‍ಗೆ ಗ್ರಾಹಕ 51 ರೂ. ತೆರಿಗೆ ಪಾವತಿಸುತ್ತಿದ್ದಾನೆ. ಇದರಿಂದ ಕೇಂದ್ರ ಸರ್ಕಾರ 10 ಲಕ್ಷ ಕೋಟಿ ಹಣವನ್ನು ಸಂಗ್ರಹಿಸುವ ಮೂಲಕ ಜನ ಸಮಾನ್ಯರ ಮೇಲೆ ಹೆಚ್ಚಿನ ಹೊರೆ ಮತ್ತು ಸಂಕಷ್ಟವನ್ನು ತಂದೊಡ್ಡಿದೆಯೆಂದು ತಿಳಿಸಿದರು.
ಗಡಿ ಸಂಕಷ್ಟ
ಕೇಂದ್ರದ ವಿದೇಶಾಂಗ ನೀತಿಗಳ ಹಿನ್ನೆಲೆಯಲ್ಲಿ ಪ್ರಸ್ತುತ ರಾಷ್ಟ್ರದ ಗಡಿ ಸಮಸ್ಯೆ ಉಲ್ಬಣಗೊಂಡಿದ್ದು, ಲಡಾಕ್‍ನಲ್ಲಿ ಚೀನಾ ಪುಂಡಾಟಿಕೆಯಿಂದ ಭಾರತದ 20 ಮಂದಿ ವೀರ ಯೋಧರು ಹುತಾತ್ಮರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚೀನಾ ಸೈನ್ಯ ಭಾರತದ ಗಡಿ ಭಾಗದಲ್ಲಿ ಆಕ್ರಮಣಕಾರಿ ಧೋರಣೆಯೊಂದಿಗೆ ಕಾರ್ಯಾಚರಿಸುತ್ತಿದ್ದರು ಕೇಂದ್ರ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿತ್ತೆಂದು ಟೀಕಿಸಿದ ಅಬೂಬಕ್ಕರ್, ತಕ್ಷಣವೆ ಕೇಂದ್ರ ಸರ್ಕಾರ ಭಾರತ ಮತ್ತು ಚೀನಾ ಗಡಿಯಲ್ಲಿ ನಡೆದ ಘಟನೆಯ ಸ್ಪಷ್ಟ ಮಾಹಿತಿಯನ್ನು ಜನತೆಗೆ ನೀಡಬೇಕೆಂದು ಒತ್ತಾಯಿಸಿದರು.
ಕಳೆದ ಮುರು ತಿಂಗಳ ಲಾಕ್ ಡೌನ್ ಅವಧಿಯಲ್ಲಿ ನಗರಸಭಾ ವ್ಯಾಪ್ತಿಯ ಹಲ ರಸ್ತೆಗಳು ಸಮರ್ಪಕ ನಿರ್ವಹಣೆಗಳಿಲ್ಲದೆ ಹಳ್ಳ್ಳ ಗುಂಡಿಗಳಿಂದ ಕೂಡಿ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಇದು ಅಪಘಾತಗಳು ಹೆಚ್ಚಲು ಕಾರಣವಾಗುವ ಸಾಧ್ಯತೆ ಇರುವುದಾಗಿ ತಿಳಿಸಿ, ಕೆಲ ವರ್ಷಗಳ ಹಿಂದೆ ಮಹದೇವಪೇಟೆ ಬಡಾವಣೆಯ ಮುಖ್ಯ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆಯಾದರು, ಇದು ಅತ್ಯಂತ ಕಳಪೆ ಮಟ್ಟದಿಂದ ಕೂಡಿರುವುದನ್ನು ಗಮನಿಸಿ ಲೋಕಾಯುಕ್ತ ತನಿಖೆಗೆ ಒಳಪಡಿಸಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೂ ಈ ನಿರ್ಣಯ ಕಾರ್ಯಗತಗೊಂಡಿಲ್ಲ. ನಗರಸಭೆಯ ಆಡಳಿತಾಧಿಕಾರಿಗಳು ತಕ್ಷಣ ಗಮನ ಹರಿಸಿ, ಕಳಪೆ ಕಾಮಗಾರಿಗೆ ಕಾರಣರಾದವರ ಮತ್ತು ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾರುಕಟ್ಟೆಯಲ್ಲೇ ಸಂತೆ ಇರಲಿ
ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಕೆ.ಜಿ.ಪೀಟರ್ ಮಾತನಾಡಿ, ಕೊರೊನಾ ಲಾಕ್ ಡೌನ್‍ನ ನಿರ್ಬಂಧಗಳ ಸಡಿಲಿಕೆಯೊಂದಿಗೆ ಸೀಮಿತ ಸಂಖ್ಯೆಯಲ್ಲಿ ವಿವಾಹ ಸಮಾರಂಭದ ಆಯೋಜನೆ, ಬಸ್‍ಗಳ ಸಂಚಾರಕ್ಕೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಹೀಗಿದ್ದೂ, ಇಲ್ಲಿಯವರೆಗೂ ನಗರದ ಸಂತೆ ಮಾರುಕಟ್ಟೆಯನ್ನು ತೆರೆಯಲು ಅವಕಾಶ ನೀಡದೆ ವರ್ತಕರು ಮತ್ತು ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆ ತೆರೆಯದಿರುವುದರಿಂದ ಅಲ್ಲೇ ಸುತ್ತಮುತ್ತಲ ರಸ್ತೆ ಬದಿಗಳಲ್ಲಿ, ಕೆಸರು ತುಂಬಿದ ಪ್ರದೇಶದ ಬಳಿಯಲ್ಲೆ ತರಕಾರಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟ ನಡೆಯುತ್ತಿರುವ ದುಸ್ಥಿತಿ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೆ ಸಂತೆ ಮಾರುಕಟ್ಟೆಯನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಪುಟಾಣಿ ನಗರ, ಮಂಗಳಾದೇವಿ ನಗರ ಹೀಗೆ ಬೆರಳೆಣಿಕೆಯ ಬಡಾವಣೆಗಳಲ್ಲಿನ ಬಡವರಿಗೆ ಮಾತ್ರ ನೆರವಿನ ಕಿಟ್ ಮತ್ತು ಹಾಲು ವಿತರಿಸಲಾಗಿದೆ. ನಗರದ ಉಳಿದ ಬಡಾವಣೆಗಳಲ್ಲು ಬಡ ಮಂದಿ ನೆಲೆಸಿದ್ದು, ಇವರಿಗೂ ನೆರವು ತಲುಪಿಸುವ ಕೆಲಸ ನಡೆಯಬೇಕೆಂದು ಆಗ್ರಹಿಸಿದರು.
ಸಂತ್ರಸ್ತರಿಗೆ ಸೂರು ನೀಡಿ
ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಜಿಲ್ಲೆಯಲ್ಲಿ 2018ನೇ ಸಾಲಿನ ಮುಂಗಾರಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂತ್ರಸ್ತರಲ್ಲಿ ಹಲ ಮಂದಿಗೆ ಸೂರಿನ ಭಾಗ್ಯ ಕಲ್ಪಿಸಲಾಗಿದೆ. ಆದರೆ, ಕಳೆದ 2019ನೇ ಸಾಲಿನಲ್ಲಿ ಸಂಭವಿಸಿದ ವಿಕೋಪ ಸಂತ್ರಸ್ತರಿಗೆ ಮನೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: