ಮೈಸೂರು

ನಿವೃತ್ತ ರಂಗಭೂಮಿ ಕಲಾವಿದರಿಗೆ ಸರಕಾರ ಶೀಘ್ರ ಪ್ಯಾಕೇಜ್ ನೀಡಲಿ

ರಾಜ್ಯ ಸರಕಾರ ನಿವೃತ್ತ ರಂಗಭೂಮಿ ಕಲಾವಿದರಿಗೆ ನೀಡಿರುವ ಆರ್ಥಿಕ ಪ್ಯಾಕೇಜ್ ಭರವಸೆಯನ್ನು ಶೀಘ್ರ ಈಡೇರಿಸಬೇಕೆಂದು ರಂಗಾಯಣದ ನಿರ್ದೇಶಕ ಎಚ್.ಜನಾರ್ದನ್ ಹೇಳಿದರು.

ಬುಧವಾರ ರಂಗಾಯಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿವೃತ್ತ ರಂಗಭೂಮಿ ಕಲಾವಿದರಿಗೆ ಆರ್ಥಿಕ ಭದ್ರತೆ ನೀಡಲು ಆರ್ಥಿಕ ಪ್ಯಾಕೇಜ್ ನೀಡಲಾಗುವುದು ಎಂದು ರಂಗಾಯಣದ 25ನೇ ವಾರ್ಷಿಕೋತ್ಸವದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಇದಾಗಿ ಹಲವು ವರ್ಷಗಳು ಕಳೆದಿದ್ದರೂ ಪ್ರಸ್ತಾವನೆ ಇನ್ನೂ ಪತ್ರದಲ್ಲೇ ಇದೆ. ಯಾವುದೇ ಅಭಿವೃದ್ಧಿಯಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಸೆ.30ರಂದು ರಂಗಾಯಣದ ನಿರ್ದೇಶಕ ಸ್ಥಾನದಿಂದ ನಿರ್ಗಮಿಸಲಿರುವ ಜನಾರ್ದನ್ ಹೇಳಿದ್ದಾರೆ.

“ಕಳೆದ ಮೂರು ವರ್ಷಗಳಿಂದ ರಂಗಾಯಣದ ನಿರ್ದೇಶಕನಾಗಿ ಈ ಪ್ರಸ್ತಾವನೆಯ ಜಾರಿಗೆ ಸಾಕಷ್ಟು ಶ್ರಮಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಂದ ಈ ಕಾರ್ಯ ನನೆಗುದಿಗೆ ಬಿದ್ದಿದೆ.”

ವಿಭಿನ್ನ ವಿಷಯಗಳನ್ನು ಆಧರಿಸಿ ನಾವು ಬಹುರೂಪಿ, ಚಿಣ್ಣರ ಮೇಳ, ಬಿ.ವಿ.ಕಾರಂತ್ ನಾಟಕೋತ್ಸವಗಳನ್ನು ನಡೆಸಿದ್ದೇವೆ. ಮುಂದೆ ಬರುವ ನಿರ್ದೇಶಕರು ಎರಡು ದಶಕದ ಇತಿಹಾಸ ಹೊಂದಿರುವ ರಂಗಾಯಣವನ್ನು ಇನ್ನಷ್ಟು ಉನ್ನತಿಯೆಡೆಗೆ ಕರೆದೊಯ್ಯಲಿ ಎಂದು ಹೇಳಿದರು.

ರಂಗಭೂಮಿಯ ಮೈಮ್ ರಮೇಶ್, ರಮೇಶ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Tags

Related Articles

error: