ಮೈಸೂರು

ನರ್ಮ್ ಯೋಜನೆಯಡಿ ನಿರ್ಮಿಸಲಾದ ಮನೆಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ : ಅಕ್ರಮವಾಸಿಗಳ ಮನೆ ತೆರವು

ಮೈಸೂರಿನ ನಗರದ ಬನ್ನಿಮಂಟಪ ಹೈವೇ ವೃತ್ತದ ಬಳಿ  ನರ್ಮ್ ಯೋಜನೆಯಡಿ ನಿರ್ಮಿಸಲಾದ ಮನೆಗಳಿಗೆ ಸ್ಲಂಬೋರ್ಡ್ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಿಗ್ಗೆ ಭೇಟಿ ನೀಡಿ  ಅಕ್ರಮ ವಾಸಿಗಳಿಗೆ ಶಾಕ್ ನೀಡಿದ್ದಾರೆ.

ನರ್ಮ್ ಯೋಜನೆಯಡಿ ಒಟ್ಟು 2 ಹಂತದಲ್ಲಿ 168 ಮನೆಗಳ ನಿರ್ಮಾಣವಾಗಿತ್ತು. ಮತ್ತೆ ಹೆಚ್ಚುವರಿಯಾಗಿ 24 ಮನೆಗಳನ್ನು ನಿರ್ಮಿಸಲಾಗಿತ್ತು. ಈ 24 ಮನೆಗಳಲ್ಲಿ ಕೆಲವರು ಅಕ್ರಮವಾಗಿ ವಾಸವಿದ್ದರು. ಅಲ್ಲದೆ ಯೋಜನೆಯ ಫಲಾನುಭವಿಗಳೇ ಎರಡೆರಡು ಮನೆಗಳಲ್ಲಿ ವಾಸವಿದ್ದರು. ಕೆಲವರು ಮನೆಗಳನ್ನು ಬಾಡಿಗೆಗೂ ನೀಡಿ ಲಾಭ ಪಡೆಯುತ್ತಿದ್ದರು. ಈ ಕುರಿತು ಹಲವು ಬಾರಿ ಸ್ಲಂಬೋರ್ಡ್ ಅಧಿಕಾರಿಗಳು ನೋಟೀಸ್ ನೀಡಿದ್ದರೂ ಅಕ್ರಮ ವಾಸಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸಿದ್ದರು. ಕಳೆದ ನಲ್ವತ್ತು ವರ್ಷಗಳಿಂದ ಅಲ್ಲಿಯೇ ಜೋಪಡಿ ಹಾಕಿ ವಾಸವಿದ್ದವರು ತಮಗೆ ಮನೆಗಳನ್ನು ಕೊಡಿಸಿ, ನಾವು ನಿಜವಾದ ಫಲಾನುಭವಿಗಳು ಎಂದು ಅಧಿಕಾರಿಗಳಲ್ಲಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಈ ಹಿಂದೆ ಸೀಜ್ ಮಾಡಿದಾಗ ಹಲವು ಅಕ್ರಮಗಳು ಬಯಲಿಗೆ ಬಂದಿತ್ತು. ಇದರಿಂದ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಿಗ್ಗೆ ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಚರಣೆ ನಡೆಸಿದರು. ಸಾಮಾನು ಸರಂಜಾಮುಗಳನ್ನು ಹೊರಹಾಕಿ 24 ಮನೆಗಳನ್ನು ಖಾಲಿ ಮಾಡಿಸಿದ್ದಾರೆ. ಹೊಸ 6 ಫಲಾನುಭವಿಗಳಿಗೆ ಮನೆ ವಿತರಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮನೆ ಕಳೆದುಕೊಂಡವರಿಂದ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಕೆಲವು ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗುತ್ತಿದ್ದು, ಹಕ್ಕುಪತ್ರಗಳನ್ನು ಪರಿಶೀಲಿಸಲಾಗುವುದು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಸಂದರ್ಭ ಮಾಜಿ ಮೇಯರ್ ನಾರಾಯಣ, ಪಾಲಿಕೆ ಸದಸ್ಯ ರಾಮು, ಪಾಲಿಕೆಯ ಅಧಿಕಾರಿಗಳು ಸ್ಥಳದಲ್ಲಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: