ಕರ್ನಾಟಕಪ್ರಮುಖ ಸುದ್ದಿ

ಕಲಾಸಿಪಾಳ್ಯ ಠಾಣೆಯ 9 ಪೊಲೀಸರಿಗೆ ಕೊರೊನಾ ಸೋಂಕು

ಬೆಂಗಳೂರು,ಜೂ.19-ಕಲಾಸಿಪಾಳ್ಯ ಪೊಲೀಸ್ ಠಾಣೆಯ 9 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದಿದೆ.

ಪೊಲೀಸ್‌ ಸಿಬ್ಬಂದಿಗೆ ರ್ಯಾಂಡಮ್‌ ಟೆಸ್ಟ್‌ ನಡೆಸಿದ ವೇಳೆ ಪಾಸಿಟಿವ್‌ ಬಂದಿದೆ. 9 ಜನ ಹೆಡ್‌ ಕಾನ್ ಸ್ಟೇಬಲ್ ಮತ್ತು ಕಾನ್ ಸ್ಟೇಬಲ್ ಗಳು ಠಾಣೆ ವ್ಯಾಪ್ತಿಯ ವಿವಿಧೆಡೆ ಸಾಮಾನ್ಯ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ತವ್ಯದ ವೇಳೆ ಅಥವಾ ಇತರ ಸಂದರ್ಭದಲ್ಲಿ ಕೋವಿಡ್‌-19 ಸೋಂಕು ತಗಲಿದೆಯೋ ಎನ್ನುವುದು ನಿಖರವಾಗಿ ಗೊತ್ತಾಗಿಲ್ಲ.

ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಕ್ವಾರಂಟೈನ್‌ ಮಾಡಲಾಗುತ್ತದೆ. ಪೊಲೀಸ್‌ ಠಾಣೆಯನ್ನು ಕೂಡ ಸೀಲ್‌ಡೌನ್‌ ಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂ.17 ರಂದು ಕೆಎಸ್‌ಆರ್‌ಪಿಯ ಐವರು ಮತ್ತು ಸಿಟಿ ಮಾರುಕಟ್ಟೆ ಠಾಣೆಯ ಮೂವರು ಪೊಲೀಸ್‌ ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದಿತ್ತು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸರಿಗೆ ಕೊರೊನಾ ಸೋಂಕು ತಗಲುತ್ತಿರುವ ನಡುವೆಯೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಪೊಲೀಸ್‌ ಕಾನ್ ಸ್ಟೇಬಲ್ ಮತ್ತು ಅಧಿಕಾರಿಗಳ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಯು-ಟ್ಯೂಬ್‌ ಲೈವ್‌ನಲ್ಲಿ ಪೊಲೀಸ್‌ ಸಿಬ್ಬಂದಿಗೆ ಸಂದೇಶ ನೀಡಿದ ಆಯುಕ್ತರು, ಕೊರೊನಾ ಲಾಕ್‌ಡೌನ್‌ ಸಡಿಲಿಕೆ ಬಳಿಕ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಅವಧಿಯಲ್ಲಿ ಸಿಬ್ಬಂದಿಗೂ ಕೊರೊನಾ ತಗಲುತ್ತಿದೆ. ಹೀಗಾಗಿ, ಸಾಕಷ್ಟು ಎಚ್ಚರಿಕೆ ಮತ್ತು ಮುಂಜಾಗ್ರತೆಯೊಂದಿಗೆ ಕೆಲಸ ಮಾಡಬೇಕು. ಕರ್ತವ್ಯದ ವೇಳೆ ಪೀಣ್ಯ ಸಿಬ್ಬಂದಿ ಸಾವಿಗೀಡಾಗಿದ್ದು, ಕೊರೊನಾಗೆ ಎಎಸ್‌ಐ ಬಲಿಯಾಗಿದ್ದಾರೆ. ವಲಸೆ ಕಾರ್ಮಿಕರ ವಾಪಸ್‌ ಕಳುಹಿಸುವುದರ ನಿರ್ವಹಣೆ, ಅವರ ಸುರಕ್ಷತೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಉತ್ತಮ ಕೆಲಸ ಮಾಡುತ್ತಿರುವ ಕೆಳ ಹಂತದ ಕಾನ್ ಸ್ಟೇಬಲ್ ಗಳು ಅತಿ ಹೆಚ್ಚು ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಹೇಳಿದರು.

ಕೊರೊನಾ ಸೋಂಕು ತಗಲುತ್ತಿದ್ದರೂ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಶೀಘ್ರದಲ್ಲೇ ವಾಸಿಯಾಗುವ ಕಾರಣ ಗಾಬರಿಯಾಗುವ ಅಗತ್ಯವಿಲ್ಲ. ರಾಜ್ಯ ಸರಕಾರದಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ. ವಿಶ್ರಾಂತಿ ನೀಡುತ್ತಿದ್ದೇವೆ. ಎಲ್ಲ ಪೊಲೀಸರು ಕೆಲಸ ಮುಗಿಸಿ ಮನೆಗೆ ಹೋಗುವ ಮೊದಲು ಸಮೀಪದ ಲಾಡ್ಜ್‌ ಅಥವಾ ಹೋಟೆಲ್‌ಗಳನ್ನು ಗುರುತಿಸಿ ಸ್ನಾನ ಮಾಡಿ ಮನೆಗೆ ಹೋಗಿ. ಮನೆಯವರಿಗೆ ತೊಂದರೆಯಾಗಬಾರದು. ಅದಕ್ಕಾಗಿ ಸ್ವಚ್ಛವಾಗಿ ಮನೆ ಪ್ರವೇಶಿಸಬೇಕು. ನಿರ್ಲಕ್ಷ್ಯತನ ಬೇಡ. ಉತ್ತಮ ಕೆಲಸ ಮಾಡಿದ್ದೀರಿ. ಇನ್ನೂ ಚೆನ್ನಾಗಿ ಕೆಲಸ ಮಾಡಿ ಎಂದು ಆಯುಕ್ತ ಭಾಸ್ಕರ್‌ ರಾವ್‌ ಸಲಹೆ ಮಾಡಿದರು. (ಎಂ.ಎನ್)

Leave a Reply

comments

Related Articles

error: