ಮೈಸೂರು

ಒತ್ತಡದಲ್ಲಿಯೇ ಬದುಕು ಕಳೆಯುವ ಪೊಲೀಸ್ ಕಾನ್ಸಟೇಬಲ್ ರಿಂದ ಸಂಶೋಧನಾ ಪ್ರಬಂಧ : ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆ

ಮೈಸೂರು,ಜೂ.19:- ಸದಾ ಸಾರ್ವಜನಿಕರ ಸೇವೆಯಲ್ಲಿಯೇ ತೊಡಗಿಸಿಕೊಂಡಿ ಒತ್ತಡದಲ್ಲಿಯೇ ಬದುಕು ಕಳೆಯುವ ಪೊಲೀಸ್ ಸಿಬ್ಬಂದಿಯೂ ಶೈಕ್ಷಣಿಕ ಸಾಧನೆ ಮಾಡಬಹುದು ಎಂಬುದಕ್ಕೆ ನಗರದ ಪೊಲೀಸ್ ಕಾನ್ಸಟೇಬಲ್ ಓರ್ವರು ಸಾಕ್ಷಿಯಾಗಿದ್ದಾರೆ.

ಮೈಸೂರು ನಗರದ ಪೊಲೀಸ್ ಕಾನ್ಸಟೇಬಲ್ ಓರ್ವರು ಮಂಡಿಸಿದ ಸಂಶೋಧನಾ ಪ್ರಬಂಧವೊಂದು ಪಿಎಚ್ ಡಿ ಪದವಿಗೆ ಅಂಗೀಕಾರವಾಗಿದೆ. ನಗರದ ಹೆಡ್ ಕಾನ್ಸಟೇಬಲ್ ಎನ್.ಸುರೇಶ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನಾ ಪ್ರಬಂಧ ಮಂಡಿಸಿದ್ದು ಇದನ್ನು ವಿವಿ ಪಿಎಚ್ ಡಿಗೆ ಅಂಗೀಕರಿಸಿದೆ.

ತಮ್ಮ ದಿನನಿತ್ಯದ ಕರ್ತವ್ಯದ ನಡುವೆ ಸಂಶೋಧನೆಗೂ ಸಮಯ ಕೊಡುವುದು ಕಷ್ಟದ ಕೆಲಸ. ಅದರಲ್ಲೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೈಯುಕ್ತಿಕ ಕೆಲಸಗಳಿಗೆ ಬಿಡುವು ಸಿಕ್ಕುವುದು ತುಸು ಕಷ್ಟವೇ. ಇಂತಹುದರಲ್ಲಿ ಸುರೇಶ್ ಪಿಎಚ್ ಡಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಸುರೇಶ್  ಮೈಸೂರು ವಿಶ್ವವಿದ್ಯಾಲಯದ  ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ‘ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತ ವರದಿಗಳ ವಿಶ್ಲೇಷಣೆ: ಒಂದು ಅಧ್ಯಯನ’ ಕುರಿತು ಸುರೇಶ್ ಸಂಶೋಧನೆ ನಡೆಸಿದ್ದರು.

ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸುರೇಶ ಎನ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುರೇಶ್ ಅವರ ಸಾಧನೆಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು,  ನಗರಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: