ಮೈಸೂರು

ಅಂತಾರಾಷ್ಟ್ರೀಯ ಯೋಗ ಆಚರಣೆ: ಮನೆಗಳಲ್ಲೇ ಯೋಗಾಭ್ಯಾಸ ಮಾಡುವವರಿಗಾಗಿ ಅರಮನೆ ಆವರಣದಲ್ಲಿ ಪ್ರದರ್ಶನ,  ಫೇಸ್ಬುಕ್ ಲೈವ್ ನಲ್ಲಿ ನೇರ ಪ್ರಸಾರ

ಮೈಸೂರು, ಜೂ21:-  ಕೋವಿಡ್-19 ಹಿನ್ನಲೆಯಲ್ಲಿ  ಮನೆ ಮನೆಗಳಲ್ಲೇ ಯೋಗಾಸನ ಮಾಡುವ ಮೂಲಕ ಮೈಸೂರಿನಲ್ಲಿ 6ನೇ ಅಂತಾರಾಷ್ಟ್ರೀಯ ಯೋಗದಿನ ಆಚರಿಸಲಾಯಿತು.  ಮನೆಗಳಲ್ಲಿ ಯೋಗಾಭ್ಯಾಸ ಮಾಡುವವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಆವರಣದಲ್ಲಿ  ಭಾನುವಾರ ಯೋಗಾಸನ  ಪ್ರದರ್ಶನ ಆಯೋಜಿಸಿ ಫೇಸ್ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಈ ವೇಳೆಯಲ್ಲಿ ಜಿಎಸ್‌ಎಸ್ ಯೋಗ ಫೌಂಡೇಶನ್‌ನ ಶ್ರೀಹರಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಅರಮನೆಯ ಆವರಣದಲ್ಲಿ ಸಾವಿರಾರು ಯೋಗ ಪಟುಗಳೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಮನೆ ಮನೆಗಳಲ್ಲೇ ಆಚರಿಸುವಂತೆ ಮನವಿ ಮಾಡಲಾಗಿದೆ ಎಂದರು.

ಮೈಸೂರು ನಗರವು ಯೋಗಭ್ಯಾಸಕ್ಕೆ ಹೆಸರುವಾಸಿಯಾಗಿದ್ದು, ರಾಜರ ಕಾಲದಿಂದಲೂ ಯೋಗಕ್ಕೆ ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ಆದರೆ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಯೋಗಾಸ್ತಕರು ತಮ್ಮ ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ದೇಹಕ್ಕೆ ಅವಶ್ಯಕವಿರುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.

ಯೋಗಭ್ಯಾಸದಲ್ಲಿ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಪವನ ಮುಕ್ತಾಸನ, ಮಕರಾಸನ, ಭುಜಂಗಾಸನ, ಸೇತು ಬಂದಾಸನ, ಅರ್ಧ ಹಲಾಸನ ಸೇರಿದಂತೆ ಇನ್ನಿತರ ಆಸನಗಳನ್ನು, ಪ್ರಾಣಾಯಾಮವನ್ನು ಸರ್ಕಾರದ ಶಿಷ್ಟಾಚಾರದಂತೆ ಅಭ್ಯಾಸ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರವಿಶಂಕರ್, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಶನ್‌ನ ಪಿ.ಗಣೇಶ್ ‌ಕುಮಾರ್, ಬಾಬಾ ರಾಮ್ ದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಶಿಕುಮಾರ್, ಮೈಸೂರು ಯೋಗ ಒಕ್ಕೂಟದ ಬಿ‌.ಪಿ.ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: