ಮೈಸೂರು

ಅಸ್ಪೃಶ್ಯ ಸಮುದಾಯಗಳನ್ನು ಮೇಲೆತ್ತಲು ಜಗಜೀವನರಾಮ್ ಅವರ ಚಿಂತನೆಗಳಿಂದ ಮಾತ್ರ ಸಾಧ್ಯ : ಹೆಚ್.ಗೋವಿಂದಯ್ಯ

ದಲಿತ, ಹಿಂದುಳಿದ ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಮೇಲೆತ್ತಲು ಜಗಜೀವನರಾಮ್ ಅವರ ಚಿಂತನೆಗಳಿಂದ ಮಾತ್ರ ಸಾಧ್ಯ ಎಂದು ಸಂಸ್ಕೃತಿ ಚಿಂತಕ ಹೆಚ್.ಗೋವಿಂದಯ್ಯ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಡಾ.ಬಾಬೂ ಜಗಜೀವನರಾಮ್ ಅಧ‍್ಯಯನ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ‘ಬಾಬೂ ಜಗಜೀವನರಾಮ್ ಚಿಂತನೆಗಳ ಪ್ರವೇಶಿಕೆ ಕಾರ್ಯಾಗಾರ’ ಎಂಬ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಡಾ.ಬಾಬೂ ಜಗಜೀವನರಾಮ್ ಅತ್ಯಂತ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಅವರು ಮತಾಂತರದ ವಿರೋಧಿಯಾಗಿದ್ದರು. ಮತಾಂತರ ಪ್ರಕ್ರಿಯೆ 2 ನೇ ದರ್ಜೆಯ ಗುಲಾಮಗಿರಿ ಸಮುದಾಯವನ್ನು  ಸೃಷ್ಠಿಸುತ್ತದೆ ಎಂಬ ಭಾವನೆ ಅವರದಾಗಿತ್ತು. ಹೀಗಾಗಿಯೇ ಅವರು ಮತಾಂತರದ ಹುನ್ನಾರವನ್ನು ತಪ್ಪಿಸುವ ಪ್ರಯತ್ನ ಮಾಡಿದ್ದರು. ಅವರ ಚಿಂತನೆಯಲ್ಲಿ ಮತಾಂತರವನ್ನು ಕೈಬಿಡಬೇಕು ಎಂಬ ಪ್ರತಿಪಾದನೆಯನ್ನು ಕಾಣಬಹುದಾಗಿದೆ ಎಂದರು.

ಅವರ ಸಮಾನತೆಯ ಚಿಂತನೆಗಳನ್ನು ಇಂದು ನಾವು ಕಾಪಿಡಿದು ಕಾಪಾಡಿಕೊಳ್ಳಬೇಕು. ಅವರ ಚಿಂತನೆಗಳ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸಬೇಕು. ಜೊತೆಗೆ ಅವರ ಚಿಂತನೆಗಳ ಕಡೆಗೆ ವಿನಮ್ರವಾಗಿ ಪ್ರವೇಶ ಮಾಡಬೇಕು ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬೂ ಜಗಜೀವನರಾಮ್ ಇಬ್ಬರನ್ನೂ ಒಟ್ಟಿಗೆ ಚರ್ಚೆ ಮಾಡುವುದು ಇಂದು ಅಸಾಧ್ಯವಾಗಿದೆ. ಏಕೆಂದರೆ ಕೆಲವು ವ್ಯಕ್ತಿಗಳು ಇಬ್ಬರನ್ನೂ ಪ್ರತ್ಯೇಕ ರೀತಿಯಲ್ಲಿ ಬಿಂಬಿಸಿದ್ದಾರೆ. ಜಗಜೀವನರಾಮ್ ಅವರನ್ನು ಅವಕಾಶವಾದಿ ರಾಜಕಾರಣಿ ಎಂದು ಹೇಳುವ ಜನರ ಮುಂದೆ ಅವರ ಚಿಂತನೆಗಳ ಬಗ್ಗೆ ಚರ್ಚೆ ನಡೆಸುವುದು ಅಸಹ್ಯಕರ ಎಂದರು.

ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ವಹಿಸಿದ್ದ ಡಾ.ಬಾಬೂ ಜಗಜೀವನರಾಮ್ ಅಧ‍್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ ಮಾತನಾಡಿ, ಜಗಜೀವರಾಮ್ ಸಮಾನತೆ ಮತ್ತು ಜಾತ್ಯಾತೀತತೆಯನ್ನು  ಪ್ರತಿಪಾದಿಸಿದ್ದರು. ಅಂತೆಯೇ ಅದರ ಮುಂದುವರೆದ ಭಾಗವೆಂಬಂತೆ ಒಳಮೀಸಲಾತಿಯನ್ನು ಜಾರಿಗೆ ತರಬೇಕೆಂದು ಪ್ರಸ್ತಾಪಿಸಿದ್ದರು ಎಂದು ಹೇಳಿದರು.

ನಾಯಕನಾದವನು ಒಂದು ಸಮುದಾಯದ ಅಂಚಿನಲ್ಲಿರುವ ಎಲ್ಲಾ ಜಾತಿಗಳನ್ನು ಜೊತೆಗೆ ಕೊಂಡೊಯ್ಯಬೇಕು. ರಾಜಕಾರಣದ ಜೊತೆಗೆ ಸಮಾನತೆಯನ್ನು ಪ್ರತಿಪಾದಿಸಬೇಕು. ಅಂತಹ ವಿರಳ ರಾಜಕಾರಣಿಗಳಲ್ಲಿ ಬಾಬೂ ಜಗಜೀವನರಾಂ ಒಬ್ಬರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ವಿವಿಯ ಕುಲಸಚಿವ ಪ್ರೊ.ಆರ್.ರಾಜಣ್ಣ, ಡಾ.ಎಂ.ಶ‍್ರೀನಿವಾಸಮೂರ್ತಿ, ಡಾ.ಚಿಕ್ಕಮಾದು ಉಪಸ‍್ಥಿತರಿದ್ದರು.  (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: