ಕರ್ನಾಟಕಪ್ರಮುಖ ಸುದ್ದಿ

ಪತ್ನಿ, ಅತ್ತೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ

ಬೆಂಗಳೂರು/ಕೋಲ್ಕತ್ತಾ,ಜೂ.23-ಪತ್ನಿ ಹಾಗೂ ಅತ್ತೆಯನ್ನು ಕೊಂದ ಟೆಕ್ಕಿ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅಮಿತ್ ಅಗರ್ವಾಲ್ (42) ಪತ್ನಿ ಶಿಲ್ಪಿ ಧಂಧಾನಿಯಾ, ಅತ್ತೆ ಲಲಿತ ಧಂಧಾನಿಯಾ ಅವರನ್ನು ಶೂಟ್ ಮಾಡಿ ಕೊಂದಿದ್ದಾನೆ. ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಮಹದೇವಪುರ ನಿವಾಸದಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದು, ಬಳಿಕ ವಿಮಾನದ ಮೂಲಕ ಕೋಲ್ಕತ್ತಾಗೆ ತೆರಳಿ ಅಲ್ಲಿ ಅತ್ತೆಯನ್ನು ಕೊಂದಿದ್ದಾನೆ. ನಂತರ ತಾನೂ ಅದೇ ಪಿಸ್ತೂಲ್‌ ಮೂಲಕ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಮಿತ್ ಮತ್ತು ಶಿಲ್ಪಿ 10 ವರ್ಷಗಳ ಹಿಂದೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಈ ದಂಪತಿ ಮಹದೇವಪುರದ ಸಮೀಪದ ಬ್ರಿಗೇಡ್‌ ಮೆಟ್ರೋ ಪೋಲಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ ಅಮಿತ್‌ ಆರಂಭದಲ್ಲಿ ಪತ್ನಿ ಜೊತೆಗೆ ಚೆನ್ನಾಗಿದ್ದನಂತೆ. ಕಳೆದ ಎರಡು ವರ್ಷಗಳಿಂದ ದಂಪತಿಯ ವೈವಾಹಿಕ ಜೀವನ ಹದಗೆಟ್ಟಿತ್ತು ಎನ್ನಲಾಗಿದೆ. ದಿನ ನಿತ್ಯ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇನ್ನು ಕುಟುಂಬ ಕಲಹದ ಹಿನ್ನೆಲೆ ವಿಚ್ಛೇದನ ನೀಡುವ ಕುರಿತು ನಿರ್ಧರವು ಆಗಿತ್ತು. ಇದೇ ವಿಚಾರಕ್ಕೆ ಜೂ.22ರಂದು ಬೆಳಿಗ್ಗೆ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಅಮಿತ್ ಶಿಲ್ಪಿಯನ್ನು ಕೊಂದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇನ್ನು ಶಿಲ್ಪಿಯ ಮೃತದೇಹ ಅಡುಕೋಣೆಯಲ್ಲಿ ಬಿದ್ದಿರುವುದನ್ನ ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ.

ಸೋಮವಾರ ಘಟನೆ ನಡೆದ ನಂತರ ಅಮಿತ್‌ ನೇರವಾಗಿ ಬೆಂಗಳೂರಿನಿಂದ ಸಂಜೆ 5.30ರ ಸುಮಾರಿಗೆ ಕೋಲ್ಕತ್ತಾದ ಫೂಲ್‍ಬಾಗನ್ ಪ್ರದೇಶದ ತಮ್ಮ ಅತ್ತೆ-ಮಾವನ ಫ್ಲ್ಯಾಟ್‍ಗೆ ಬಂದಿದ್ದಾನೆ. ಅತ್ತೆ ಲಲಿತಾ ಧಾಂಧಾನಿಯಾ ಜೊತೆ ಅಮಿತ್‌ ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಮಿತ್‌ ಪಿಸ್ತೂಲ್‌ ತೆಗೆದು ಅತ್ತೆಗೆ ಶೂಟ್‌ ಮಾಡಿದ್ದಾನೆ. ಈ ವೇಳೆ ಭಯಗೊಂಡ ಮಾವ ಸುಭಾಷ್‌ ಧಾಂಧಾನಿಯಾ ಪಕ್ಕದ ಮನೆಗೆ ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಕೊಂಚ ಸಮಯದ ಬಳಿಕ ಮನೆಯೊಳಗೆ ಬಂದಾಗ ಅಮಿತ್‌ ಕೂಡ ಶೂಟ್‌ ಮಾಡಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದು ಕೋಲ್ಕತ್ತಾ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ಮನೆ ಸುತ್ತ ಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಅಮಿತ್‌ ಬ್ಯಾಗಿನಲ್ಲಿ ಮರಣ ಪತ್ರ ಸಿಕ್ಕಿದೆ. ಇದರಲ್ಲಿ ತನ್ನ ಪತ್ನಿಯನ್ನ ಕೊಂದಿರುವುದಾಗಿ ಅಮಿತ್‌ ತಿಳಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಕೋಲ್ಕತ್ತಾ ಪೊಲೀಸರು, ಮಹದೇವಪುರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆ ಅಮಿತ್‌ ಅಪಾರ್ಟ್‌ಮೆಂಟ್‌ಗೆ ಬಂದ ಮಹದೇವಪುರ ಪೊಲೀಸರಿಗೆ ಶಿಲ್ಪಿಯ ಮೃತದೇಹ ಸಿಕ್ಕಿತ್ತು. ಸದ್ಯ ಈ ಬಗ್ಗೆ ಬೆಂಗಳೂರು ಹಾಗೂ ಕೋಲ್ಕತ್ತಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಾಥಮಿಕವಾಗಿ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂಬುದು ತಿಳಿದುಬಂದಿದೆ. ಆದರೆ ಈ ಬಗ್ಗೆ ನಿಖರ ಕಾರಣ ಏನು ಅನ್ನುವುದನ್ನು ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಲಿದ್ದೇವೆ ಎಂದು ತಿಳಿಸಿದ್ದಾರೆ. ಸದ್ಯ ಮಾವ ಸುಭಾಷ್‌ ಹಾಗೂ ಈ ದಂಪತಿಯ 10 ವರ್ಷದ ಪುತ್ರ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: