ಮೈಸೂರು

ಪ್ರತಿಯೊಬ್ಬನೂ ತೆರಿಗೆ ಪಾವತಿಸಬೇಕು, ತೆರಿಗೆ ಇಲ್ಲದೇ ಸರಕು ಸೇವೆ ಲಭಿಸಲ್ಲ : ಡಾ.ಕೆ.ಎ.ವಿಲಿಯಂ

ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ವಿಭಾಗ ಹಾಗೂ ಮೈಸೂರು ವಿವಿಯ ವಾಣಿಜ್ಯ ಮತ್ತು ವ್ಯವಹಾರ ಅಧ್ಯಾಪಕರ ಒಕ್ಕೂಟ ಇವರ ಸಹಯೋಗದಲ್ಲಿ ‘ಜಿ.ಎಸ್.ಟಿ ಯ ಸ್ವರೂಪ, ಕಾರ್ಯವೈಖರಿ ಮತ್ತು ಅದರ ಪ್ರಭಾವ’ವನ್ನು ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಶನಿವಾರ  ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಮೈಸೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ,  ಪ್ರಸ್ತುತ ದಿನಗಳಲ್ಲಿ ದೇಶದ ಆರ್ಥಿಕತೆಯಲ್ಲಾಗುತ್ತಿರುವ ಬದಲಾವಣೆಯ ಸಂದರ್ಭದಲ್ಲಿ  ಇಂತಹ ಕಾರ್ಯಾಗಾರವನ್ನು ಏರ್ಪಡಿಸಿರುವುದು ನಿಜಕ್ಕೂ ಸಂತಸದ ವಿಚಾರ. ನೋಟಿನ ಅಮಾನ್ಯೀಕರಣದ ನಂತರ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಮತ್ತು ಬೆಳವಣಿಗೆಗಳು ಕಂಡುಬಂದವು. ಸ್ವಾತಂತ್ರ್ಯ ನಂತರದ ದಿನಗಳಿಂದಲೂ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಬಿಂಬಿತವಾಗಿದೆ. ಆದರೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಸಕಾರಾತ್ಮಕ ಬೆಳವಣಿಗೆಯಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು.

ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ ತೆರಿಗೆಯನ್ನು ಪಾವತಿಸಬೇಕು. ತೆರಿಗೆ ಇಲ್ಲದೇ ಯಾವ ಸರಕು ಸೇವೆಯೂ ಲಭಿಸುವುದಿಲ್ಲ. ಎಲ್ಲಾ ವಿಭಿನ್ನ ರೀತಿಯ ತೆರಿಗೆಗಳು ಜಿ.ಎಸ್.ಟಿ. ಅಡಿಯ್ಲಲೇ ಬರುತ್ತವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೆಕ್ಟರ್ ಸಂತ ಫಿಲೋಮಿನಾ ಕಾಲೇಜಿನ ಗುರು ಲೆಸ್ಲಿ ಮರೋಸ್ ಮಾತನಾಡಿ, ತೆರಿಗೆಯಿಂದ ಯಾವೊಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ‍್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆಯನ್ನು ಪಾವತಿಸಲೇಬೇಕು. ಕೇವಲ ಆದಾಯ ತೆರಿಗೆ ಮಾತ್ರವೇ ತೆರಿಗೆಯಲ್ಲ. ನಾವು ಕೊಂಡುಕೊಳ್ಳುವ ಪ್ರತಿಯೊಂದು ವಸ್ತುವಿಗೂ ತೆರಿಗೆ ಕಟ್ಟುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲೂ ತೆರಿಗೆ ಇದ್ದೇ ಇರುತ್ತದೆ. ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇನ್ನಿತರ ಎಲ್ಲಾ ತೆರಿಗೆಗಳಿಗೂ ಜಿ.ಎಸ್.ಟಿ ಮಾತೃ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಆರ್ಥಿಕತೆಯಲ್ಲಿ ವಿಲೀನಗೊಳ್ಳಲು ಪ್ರಯತ್ನಿಸುತ್ತಿದೆ ಎಂದರು.

ಆಟೋಮೋಟಿವ್ ಆಕ್ಸೆಲ್ಸ್ ನ ಅಧ‍್ಯಕ್ಷ ಡಾ. ಎನ್.ಮುತ್ತುಕುಮಾರ್ ಮಾತನಾಡಿ, ಇಂದು ನಮ್ಮ ದೇಶದ ಆರ್ಥಿಕತೆಗೆ ಜಿ.ಎಸ್.ಟಿ.ಏಕೆ ಬೇಕು? ಎಂಬ ಪ್ರಶ್ನೆ ಮುಖ‍್ಯವಾಗುತ್ತದೆ. ಅಬ್ದುಲ್ ಕಲಾಂ ಅವರು ದೇಶದ ಆರ್ಥಿಕತೆ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಂಡಿದ್ದವರು. 12-13 ವರ್ಷಗಳ ನಂತರ ಅವರ ಯೋಜನೆಗಳನ್ನು ಭಾರತ ಅಳವಡಿಸಿಕೊಂಡಿದೆ. 1991 ರಲ್ಲಿ ಭಾರತಕ್ಕೆ ಜಾಗತೀಕರಣದ ಪರಿಚಯವಾಯಿತು. ಕೇವಲ ಜ್ಞಾನ, ಕೌಶಲ್ಯ ಮಾತ್ರ ಮುಖ್ಯವಲ್ಲ. ಜೊತೆಗೆ ಸಕಾರಾತ್ಮಕ ವ್ಯಕ್ತಿತ್ವ ಇರಬೇಕು. ಭಾರತ ಉತ್ತಮ ಸಂಸ್ಕೃತಿಯನ್ನು ಹೊಂದಿರುವ ಅದ್ಭುತ ರಾಷ್ಟ್ರ ಎಂದರು.

 ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಂ.ಮಣಿ, ವಿ.ಕುಮಾರ್, ವಿಜಯ್ ಕುಮಾರ್, ಅಕಾಡೆಮಿಕ್ ಡೀನ್ ಮಲ್ಲಿಕಾರ್ಜುನ ಶೆಟ್ಟಿ, ಪ್ರೊ.ಮಹದೇವಸ್ವಾಮಿ, ಪ್ರೊ.ಯೋಗೇಶ್, ಸೌಮ್ಯ ಎಚ್.ಎಲ್ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: