ದೇಶಪ್ರಮುಖ ಸುದ್ದಿ

ಲಡಾಖ್ ಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ: ಗಡಿಯಲ್ಲಿ ವಾಯುಪಡೆಯಿಂದ ಫೈಟರ್ ಜೆಟ್ ಹಾರಾಟ

ನವದೆಹಲಿ,ಜೂ.23- ಭಾರತ-ಚೀನಾ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಇಂದು ಲಡಾಖ್ ಗೆ ಭೇಟಿ ನೀಡಿದ್ದಾರೆ.

ಗಡಿಯಲ್ಲಿ ಕಳೆದ ಆರು ವಾರಗಳಿಂದ ನಡೆಯುತ್ತಿರುವ ಚೀನಾದ ಸೇನೆ ಜಮಾವಣೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಜೊತೆಗೆ ಮೂರು ಸ್ಥಳಗಳಲ್ಲಿ ಸೈನಿಕರ ಜೊತೆ ಸಂವಾದ ನಡೆಸಲಿದ್ದಾರೆ.

ಫೈಟರ್ ಜೆಟ್ ಹಾರಾಟ: ಲಡಾಖ್‌ನ ಪೂರ್ವ ಭಾಗದಲ್ಲಿನ ವಿವಾದಿತ ಪ್ರದೇಶದ ಸಮೀಪದ ನೆಲೆಗಳಲ್ಲಿ ಭಾರತ ಸೇನಾ ಪಡೆ, ಯುದ್ಧ ವಾಹನಗಳು ಹಾಗೂ ಭಾರಿ ಉಪಕರಣಗಳನ್ನು ನಿಯೋಜಿಸಿದೆ. ಜೊತೆಗೆ, ಇಂದು ವಾಯುಪಡೆಯ ಫೈಟರ್‌ ಜೆಟ್‌ಗಳು ಹಾರಾಟ ನಡೆಸುತ್ತಿವೆ.

ಗಡಿ ವಿವಾದವನ್ನು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಇತ್ಯರ್ಥಗೊಳಿಸುವುದಾಗಿ ಉಭಯ ದೇಶಗಳು ಹೇಳಿಕೆ ನೀಡಿವೆ. ಹಾಗಿದ್ದರೂ ಗಡಿಯಲ್ಲಿ ಸೇನಾ ಚಟುವಟಿಕೆ ಬಿರುಸುಗೊಂಡಿರುವುದಾಗಿ ವರದಿಯಾಗಿದೆ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದ ನೆಲೆಗಳಿಗೆ ಯುದ್ಧ ವಾಹನಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಭಾರತ ಸಾಗಿಸಿದೆ. ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ನಿರಂತರವಾಗಿ ನಿಗಾ ವಹಿಸಿದೆ. ಇತ್ತೀಚಿಗೆ ಚೀನಾದೊಂದಿಗೆ ಸಂಘರ್ಷ ಆರಂಭವಾದ ಬಳಿಕ ಈ ಪ್ರದೇಶದಲ್ಲಿ ವಾಯುಪಡೆಯ ಚಟುವಟಿಕೆ ಹೆಚ್ಚಾಗಿದೆ.

ಚೀನಾ ಜತೆಗಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಇಂಡೊ- ಟಿಬೆಟ್‌ ಗಡಿ ಪೊಲೀಸ್‌ (ಐಟಿಬಿಪಿ), ಇಸ್ರೇಲ್‌ ನಿರ್ಮಿತ ಡ್ರೋಣ್‌ಗಳನ್ನು ಬಳಸುವ ಮೂಲಕ ಭಾರತ ತಾಂತ್ರಿಕ ಕಣ್ಗಾವಲು ಹೆಚ್ಚಿಸಿದೆ. ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ಹೆಚ್ಚಿನ ನಿಗಾ ವಹಿಸಿದೆ.

ಜೂ.15ರ ತಡರಾತ್ರಿ ಗಾಲ್ವನ್‌ ಕಣಿವೆಯ ವಾಸ್ತವ ಗಡಿರೇಖೆ ಬಳಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದರಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಇದಾದ ಬಳಿಕ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. (ಎಂ.ಎನ್)

Leave a Reply

comments

Related Articles

error: