ದೇಶಮನರಂಜನೆ

ನಟಿ ಸಮಂತಾ ಅಕ್ಕಿನೇನಿ ಆತ್ಮೀಯ ಸ್ನೇಹಿತೆಗೆ ಕೊರೊನಾ ಪಾಸಿಟಿವ್: ಅಭಿಮಾನಿಗಳಲ್ಲಿ ಆತಂಕ

ಹೈದರಾಬಾದ್,ಜೂ.24-ನಟಿ ಸಮಂತಾ ಅಕ್ಕಿನೇನಿ ಅವರ ಆತ್ಮೀಯ ಸ್ನೇಹಿತೆ, ಮಾಡೆಲ್-ಫ್ಯಾಷನ್ ವಿನ್ಯಾಸಕಿ ಶಿಲ್ಪಾ ರೆಡ್ಡಿ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದರಿಂದ ಸಮಂತಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಒಂದು ವಾರದ ಹಿಂದಷ್ಟೇ ಶಿಲ್ಪಾ ರೆಡ್ಡಿ, ಸಮಂತಾ ಜತೆಗಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಶಿಲ್ಪಾ ರೆಡ್ಡಿ ಕೆನ್ನೆಗೆ ಸಮಂತಾ ಚುಂಬಿಸುತ್ತಿರುವ ಫೋಟೊ ಅದು. ಶಿಲ್ಪಾ ರೆಡ್ಡಿ ಈಗ ತಮಗೆ ಕೊರೊನಾ ವೈರಸ್ ಇದೆ ಎಂದಿದ್ದಾರೆ. ಹೀಗಾಗಿ ಸಮಂತಾ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ. ಸಮಂತಾ ಅವರನ್ನು ಯಾವಾಗ ಭೇಟಿ ಮಾಡಿದ್ದೀರಿ? ಇದು ಹಳೆಯ ಫೋಟೊವೇ? ಎಂದು ಶಿಲ್ಪಾ ಅವರನ್ನು ಪ್ರಶ್ನಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಶಿಲ್ಪಾ ರೆಡ್ಡಿ, ತಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಅದನ್ನು ಕಡಿಮೆ ಮಾಡುವಲ್ಲಿ ಹೇಗೆ ಯಶಸ್ವಿಯಾಗಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಹಾಗೆಯೇ ತಮ್ಮ ಸೋಂಕಿನ ಮೂಲ ಯಾವುದು ಎಂಬುದನ್ನೂ ಹೇಳಿದ್ದಾರೆ.

ಕೆಲವು ವಾರಗಳ ಹಿಂದೆ ಕುಟುಂಬದ ಆಪ್ತರೊಬ್ಬರು ತಮ್ಮಮನೆಗೆ ಭೇಟಿ ನೀಡಿದ್ದರು. ಹುಷಾರಿಲ್ಲ ಎಂದು ತಮ್ಮ ಮನೆಗೆ ಮರಳಿದ್ದರು. ಕೆಲವು ದಿನಗಳ ಬಳಿಕ ತಮ್ಮ ಸ್ನೇಹಿತರ ಮನೆಯ ಸದಸ್ಯರೊಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು ತಿಳಿಯಿತು. ಕೂಡಲೇ ಶಿಲ್ಪಾ ರೆಡ್ಡಿಯ ಮನೆಯವರೆಲ್ಲರೂ ಕೋವಿಡ್ 19 ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದ್ದರು.

ಶಿಲ್ಪಾ ಮತ್ತು ಅವರ ಪತಿ ಇಬ್ಬರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಆದರೆ ಇಬ್ಬರಲ್ಲಿಯೂ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆರೋಗ್ಯಕರ ಪಥ್ಯಾಹಾರ ಮತ್ತು ಫಿಟ್ನೆಸ್ ಪ್ಲಾನ್ ಅನುಸರಿಸುವ ಮೂಲಕ ಈ ವೈರಸ್‌ನ ಪರಿಣಾಮವನ್ನು ಕ್ರಮೇಣ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಮದ್ದು ಎಂದು ಜನರಿಗೆ ಸಲಹೆ ನೀಡಿದ್ದಾರೆ. ‘ಕೋವಿಡ್-ಇನ್‌ಫೋ-ಮುನ್ನೆಚ್ಚರಿಕೆಗಳು’ ಎಂದು ಬರೆದಿರುವ ಅವರು, ಪ್ರತಿದಿನ ನಮ್ಮ ದೇಹಗಳನ್ನು ಸಿದ್ಧವಾಗಿಡಬೇಕು ಮತ್ತು ಇಮ್ಯುನಿಟಿ ಹೆಚ್ಚಿಸಬೇಕು. ನಿಮ್ಮ ವಿಟಮಿನ್ ಡಿ ಮಟ್ಟ ಪರೀಕ್ಷಿಸಿಕೊಳ್ಳಿ, ವಿಟಮಿನ್ ಸಿ, ಜಿಂಕ್, ದೇಹಕ್ಕೆ ಒದಗಿಸಿ ಎಂದು ಸುದೀರ್ಘ ಮಾಹಿತಿ ನೀಡಿದ್ದಾರೆ.

ಫ್ಯಾಷನ್ ಲೋಕದಲ್ಲಿ ಖ್ಯಾತನಾಮರಲ್ಲಿ ಒಬ್ಬರಾದ ಶಿಲ್ಪಾ ರೆಡ್ಡಿ, ಫಿಟ್ನೆಸ್ ಹಾಗೂ ಆರೋಗ್ಯದ ವಿಚಾರವಾಗಿ ಹೆಚ್ಚು ಗಮನ ಹರಿಸುವವರು. ಅದರ ಕುರಿತು ಜನರಿಗೆ ಮಾಹಿತಿ ನೀಡಲೆಂದೇ ಅವರು ಬ್ಲಾಗ್‌ಒಂದನ್ನು ಬರೆಯುತ್ತಿದ್ದಾರೆ. ಅದರಲ್ಲಿ ದೇಹದ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು, ಆರೋಗ್ಯಯುತವಾಗಿರಲು ಯಾವ ರೀತಿ ಆಹಾರ ಸೇವನೆ, ವ್ಯಾಯಾಮ ಮಾಡಬೇಕು ಎಂದು ಅವರು ಸಲಹೆ ನೀಡುತ್ತಿದ್ದಾರೆ. (ಎಂ.ಎನ್)

 

Leave a Reply

comments

Related Articles

error: