ದೇಶಪ್ರಮುಖ ಸುದ್ದಿ

ಪೂರ್ವ ಲಡಾಖ್ ನ ಯೋಧರನ್ನು ಹುರಿದುಂಬಿಸಿದ ಸೇನಾ ಮುಖ್ಯಸ್ಥ

ಲಡಾಖ್,ಜೂ.24-ಪೂರ್ವ ಲಡಾಖ್ ಭೇಟಿಯಲ್ಲಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಇಂದು ಸೇನಾಪಡೆಗಳೊಂದಿಗೆ ಸಂವಾದ ನಡೆಸಿದ್ದಾರೆ.

ಪೂರ್ವ ಲಡಾಖ್ ಗೆ ಭೇಟಿ ನೀಡಿದ ನಾರವಾನೆ ಅವರನ್ನು ಯೋಧರು ಗೌರವಾದರಗಳಿಂದ ಬರಮಾಡಿಕೊಂಡರು. ಅವರನ್ನು ಮಾತನಾಡಿಸಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡರು. ಈ ಕಠಿಣ ಪರಿಸ್ಥಿತಿಯಲ್ಲಿ ನೀವು ತೋರುತ್ತಿರುವ ಮನೋಸ್ಥೈರ್ಯ, ಉತ್ಸಾಹ ಮೆಚ್ಚುವಂಥದ್ದು, ಇದನ್ನು ಮುಂದುವರಿಸಿ ಎಂದು ಹುರಿದುಂಬಿಸಿದರು.

ನಿನ್ನೆ ಲೇಹ್ ಗೆ ತೆರಳಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಾಮರ್ಶೆ ನಡೆಸಿದ್ದ ನಾರವಾನೆ ನಂತರ ಲಡಾಕ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಜೊತೆ ಕೂಡ ಮಾತುಕತೆ ನಡೆಸಿದ್ದರು. ಉತ್ತರ ಭಾಗದ ಸೇನಾ ಕಮಾಂಡರ್ ಮತ್ತು ಲೇಹ್ ಕಾರ್ಪ್ಸ್ ಕಮಾಂಡರ್ ಕೂಡ ಸಂವಾದದ ವೇಳೆ ಹಾಜರಿದ್ದರು. ಕಳೆದ ಜೂನ್ 15ರಂದು ಘರ್ಷಣೆಯಲ್ಲಿ ಗಾಯಗೊಂಡು ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕರನ್ನು ಸಹ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.

ಭಾರತ-ಚೀನಾ ಗಡಿಯ ಪೂರ್ವ ಲಡಾಖ್ ನಲ್ಲಿನ ವಾಸ್ತವ ಸಂಗತಿಗಳನ್ನು ತಿಳಿದುಕೊಳ್ಳಲು ಮತ್ತು ಚೀನಾದ ಮಿಲಿಟರಿ ಜೊತೆಗೆ ನಡೆದಿರುವ ಮಾತುಕತೆಯ ಬೆಳವಣಿಗೆಗಳ ಕುರಿತು ಪರಾಮರ್ಶೆ ನಡೆಸಲು ನಾರವಾನೆ ಅವರು ಲಡಾಖ್ ಗೆ ಭೇಟಿ ನೀಡಿದ್ದಾರೆ.

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಗಡಿ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿ, 43 ಮಂದಿ ಚೀನಾ ಯೋಧರು ಸಾವು-ನೋವು ಕಂಡ ಬಳಿಕ ಕೂಡ ಭಾರತ-ಚೀನಾ ಮಿಲಿಟರಿ ಮಟ್ಟದ ಮಾತುಕತೆಗಳನ್ನು ನಡೆಸುತ್ತಲೇ ಬಂದಿದೆ. (ಎಂ.ಎನ್)

Leave a Reply

comments

Related Articles

error: