ಮನರಂಜನೆ

ಕಿರುತೆರೆ ನಟನಿಗೆ ಕೊರೊನಾ ಪಾಸಿಟಿವ್: ಕ್ವಾರಂಟೈನ್ ನಲ್ಲಿ `ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ 

ಬೆಂಗಳೂರು/ಹೈದರಾಬಾದ್,ಜೂ.25-ತೆಲುಗು ಕಿರುತೆರೆಯ ಕಲಾವಿದರೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದರಿಂದ `ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ರಶ್ಮಿ ಪ್ರಭಾಕರ್ ಕ್ವಾರಂಟೈನ್ ನಲ್ಲಿದ್ದಾರೆ.

ಏಕೆಂದರೆ ರಶ್ಮಿ ತೆಲುಗಿನಲ್ಲಿ ‘ಪೌರ್ಣಮಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ಅವರು ಹೈದರಾಬಾದ್‌ಗೆ ತೆರಳಿದ್ದರು. ಆದರೆ ಅಲ್ಲಿಯ ಕಿರುತೆರೆ ಕಲಾವಿದರೊಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ಖಚಿತಗೊಂಡಿದೆ. ಹೀಗಾಗಿ ರಶ್ಮಿ ಅವರು ಕ್ವಾರಂಟೈನ್ ನಲ್ಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಶ್ಮಿ, ಕಲಾವಿದರೊಬ್ಬರಿಗೆ ಕೊರೊನಾ ಬಂದಿದ್ದು, ಅವರು ಕೆಲ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದರು. ತಂತ್ರಜ್ಞರು ಸಾಮಾನ್ಯವಾಗಿ ಎಲ್ಲ ಧಾರಾವಾಹಿಗಳಿಗೂ ಕೆಲಸ ಮಾಡುತ್ತಾರೆ. ಹಾಗಾಗಿ, ನಾನೀಗ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ಸಹ ಕಲಾವಿದರೊಬ್ಬರು ಅವರೊಂದಿಗೆ ಮಾತನಾಡಿದ್ದಾರೆ. ಸದ್ಯ ಅವರೀಗ ಆರಾಮಾಗಿದ್ದಾರೆ ಎಂದಿದ್ದಾರೆ.

ಕೊರೊನಾ ಪಾಸಿಟಿವ್ ಬಂದ ಕಲಾವಿದನ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರೋ, ಅವರನ್ನೆಲ್ಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆಯಂತೆ. ಜೊತೆಗೆ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆಯಂತೆ.

ಚಿತ್ರೀಕರಣ ಮಾಡುವಾಗ ಬಹಳ ಎಚ್ಚರಿಕೆಯನ್ನು ತೆಗೆದುಕೊಂಡಿತ್ತಂತೆ ಧಾರಾವಾಹಿ ತಂಡ. ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಚಾಚು ತಪ್ಪದೇ ಪಾಲನೆ ಮಾಡಲಾಗಿತ್ತಂತೆ. ‘ಲಗೇಜು, ಬಟ್ಟೆ ಸೇರಿದಂತೆ ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಶೂಟಿಂಗ್ ಮಾಡುವುದಕ್ಕೂ ಮೊದಲೇ ನಮಗೆ ಥರ್ಮಲ್‌ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ತಂತ್ರಜ್ಞರು ಮತ್ತು ಕಲಾವಿದರು ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿತ್ತು. ವಸ್ತ್ರ ವಿನ್ಯಾಸಕರು, ಮೇಕಪ್ ಕಲಾವಿದರು ಪಿಪಿಇ ಕಿಟ್‌ ಧರಿಸಿಕೊಂಡೇ ಕೆಲಸ ಮಾಡಬೇಕಿತ್ತು’ ಎಂದು ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕಲಾವಿದನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಧಾರಾವಾಹಿಗಳ ಶೂಟಿಂಗ್ ನಿಲ್ಲಿಸುವಂತೆ ಅಲ್ಲಿನ ಟಿವಿ ಅಸೋಶಿಯೇಷನ್ ಸೂಚನೆ ನೀಡಿದೆ. ಹಾಗಾಗಿ, ರಶ್ಮಿ ನಟಿಸುತ್ತಿದ್ದ ‘ಪೌರ್ಣಮಿ’ ಧಾರಾವಾಹಿ ಶೂಟಿಂಗ್ ಕೂಡ ನಿಂತಿದೆ. (ಎಂ.ಎನ್)

Leave a Reply

comments

Related Articles

error: