ಪ್ರಮುಖ ಸುದ್ದಿಮೈಸೂರು

ಮೊದಲ ಆಷಾಢ ಶುಕ್ರವಾರ :ಅಲಂಕೃತಗೊಂಡ ತಾಯಿ ಚಾಮುಂಡೇಶ್ವರಿ ದೇವಾಲಯ; ನೆರವೇರಿದ ಧಾರ್ಮಿಕ ಕೈಂಕರ್ಯ; ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಮೈಸೂರು,ಜೂ.26:-  ಪ್ಲೇಗ್ ಕಾಲರಾ ಬಂದ ಸಂದರ್ಭದ ಶತಮಾನದ ಇತಿಹಾಸವನ್ನು ಈ ಆಷಾಢ ಮಾಸ  ಮತ್ತೊಮ್ಮೆ ಜನರ ಅನುಭವಕ್ಕೆ ತರಿಸುತ್ತಿದೆ.  ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಲಕ್ಷಾಂತರ ಮಂದಿ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದು ಸಾಮಾನ್ಯ. ಆದರೆ ಈ ಬಾರಿ ಕೋವಿಡ್-19 ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಆಷಾಢದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಧಾರ್ಮಿಕ ಕೈಂಕರ್ಯಗಳು ಎಂದಿನಂತೆ ನಡೆಯಲಿವೆ.

ದೇವಾಲಯವನ್ನು ಫಲಪುಷ್ಪಗಳಿಂದ ಅಲಂಕರಿಸಿ ಸಿಂಗಾರ  ಮಾಡಲಾಗಿದೆ. ಚಾಮುಂಡಿ ದೇವಾಲಯ ನವವಧುವಿನಂತೆ ಕಂಗೊಳಿಸುತ್ತಿದೆ.  ಚಾಮುಂಡೇಶ್ವರಿ ದೇವಾಲಯದ ಇತಿಹಾಸದಲ್ಲೇ   ಎರಡನೇ ಬಾರಿಗೆ ಹೀಗೆ ಸಾಂಕ್ರಾಮಿಕ ರೋಗಕ್ಕೆ ಹೆದರಿ ದೇವಾಲಯವನ್ನು ಮುಚ್ಚಿ ಸಾಂಪ್ರದಾಯಿಕ ಧಾರ್ಮಿಕ ಕೈಂಕರ್ಯಕ್ಕೆ ಸೀಮಿತಗೊಳಿಸಲಾಗಿದೆ. ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು  ವ್ಯಾಪಿಸಿದ ಪರಿಣಾಮ  ಆಗ ಜನರು ಮನೆ, ಊರು ತೊರೆದಿದ್ದರು. ಅಂದು ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.

ಆಗ ಸ್ವತಃ ಮಹಾರಾಜರೇ  ನಿತ್ಯ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರದಕ್ಷಿಣೆ ಹಾಕಿದ್ದರು. ಅಂದು ಪುರೋಹಿತರ ಹೊರತಾಗಿ ಬೇರೆ ಯಾರೂ  ಸಹ ದೇವಾಲಯದತ್ತ ಮುಖ ಮಾಡಿದ್ದು ವಿರಳ ಎನ್ನುತ್ತಾರೆ.  ಶತಮಾನಗಳ ಹಿಂದಿನ ಆಷಾಢದಂತೆಯೇ ಈ ಬಾರಿಯೂ  ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಿರುವುದು ಶತಮಾನದ ಇತಿಹಾಸ ಮರುಕಳಿಸಿದಂತಿದೆ.

ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ ದೀಕ್ಷಿತ್ ಮಾತನಾಡಿ  ನೂರು ವರ್ಷಗಳ ಹಿಂದೆ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ಕಾಯಿಲೆಗಳು ಬಂದಾಗಲು ಜನರು ಬರುವುದೇ ವಿರಳವಾಗಿತ್ತು. ಮಹಾರಾಜರು ಹಾಗೂ ದೇವಾಲಯದ ಆಗಮಿಕರು, ಅರ್ಚಕರು ವಾತ್ರ ಪೂಜೆ ಸಲ್ಲಿಸಿ ನಂತರ ದೇವಾಲಯಕ್ಕೆ ಬೀಗ ಹಾಕಿ ಬರುತ್ತಿದ್ದ ಕಥೆಯನ್ನು ನಾನು ಚಿಕ್ಕವನಿದ್ದಾಗ ನಮ್ಮ ಮುತ್ತಜ್ಜ ಏಕಾಂಬರ ದೀಕ್ಷಿತರು ಹಾಗೂ ತಾತ ನಾರಾಯಣ ದೀಕ್ಷಿತರು ಹೇಳಿದ್ದರು. ಇಂದು ನನಗೆ ಸ್ವಂತ ಅನುಭವಕ್ಕೆ ಬರುತ್ತಿದೆ. ಸಾರ್ವಜನಿಕರು ಮನೆಯಿಂದಲೇ ದೇವರನ್ನು ಪ್ರಾರ್ಥಿಸಿ. ದೇವಾಲಯಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿದೆ. ದೇವಸ್ಥಾನದಲ್ಲಿ ತಾಯಿಗೆ ಪೂಜಾ ಕೈಂಕರ್ಯಗಳು ಪ್ರತಿವರ್ಷದಂತೆ ನಡೆಯಲಿವೆ ಎಂದರು. ಆಷಾಢ ಮಾಸ ವಿಶೇಷ ಮಾಸ. ಶಕ್ಯಿ ಆರಾಧನೆ ಮಾಡುವುವು. ಕುಟುಂಬ ಸಮೇತರಾಗಿ ಬಂದು ಪೂಜೆ ಮಾಡ್ತಾರೆ. ಬೆಳಿಗ್ಗೆ 4.30ರಿಂದ ರುದ್ರಾಭೀಷೇಕ, ಪಂಚಾಮೃತ ಅಭಿಷೇಕ, ಒಳಗಡೆ ವಿಶೇಷ ಅಲಂಕಾರ,  ನಾಲ್ಕು ಶುಕ್ರವಾರವೂ ಇದೇ   ರೀತಿ ನಡೆಯತ್ತೆ. ಭಕ್ತಾದಿಗಳು ಮನೆಯಲ್ಲೇ ಕೊರೋನಾ ರೋಗ ಬೇಗ ಹೋಗಲಿ, ನಾವು ಕೂಡ ದೇವಿಯ ಸೇವೆ ಮಾಡುವಂತ ಭಾಗ್ಯ ಬೇಗ ಸಿಗಲಿ ಎಂದು ಪ್ರಾರ್ಥಿಸುವುದು ಉತ್ತಮ. ಶುಕ್ರವಾರ, ಶನಿವಾರ, ಭಾನುವಾರ ರಜೆ ಇರತ್ತೆ, ಸರ್ಕಾರಿ ರಜಾ ದಿನ ಕೂಡ  ರಜೆ ಇರತ್ತೆ, ವರ್ಧಂತಿಗೂ ರಜೆ ಇದೆ ಎಂದರು.

ಸ್ಥಳಿಯ ನಿವಾಸಿ ವೀರಭದ್ರಸ್ವಾಮಿ ಮಾತನಾಡಿ  ದೇವಾಲಯಕ್ಕೆ ಎಂದೂ ಧಾರ್ಮಿಕ ಕಾರ್ಯ ನಡೆಸದೇ ಬಾಗಿಲು ಮುಚ್ಚಿದ ಉದಾಹರಣೆಗಳೇ ಇಲ್ಲ. ಆದರೆ, ಹಿಂದೆ ನಮ್ಮ ಹಿರಿಯರು ಹೇಳಿರುವಂತೆ ಕಾಲರಾ, ಪ್ಲೇಗ್ ಕಾಯಿಲೆ ಬಂದಾಗ ಮಹಾರಾಜರೊಬ್ಬರೇ ಕುದುರೆ ಏರಿ ಬಂದು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿ ಬಳಿಕ ದೇವಾಲಯ ಬಾಗಿಲು ಮುಚ್ಚಿದ್ದ ಬಗ್ಗೆ ಕೇಳಿದ್ದೇನೆ. ಈಗಲೂ ಅದೇ ರೀತಿ ಜನರಿಲ್ಲದೆ ಆಷಾಢ ಪೂಜೆ ನಡೆಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 4.30ರಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ರುದ್ರಾಭಿಷೇಕ, ಅರ್ಚನೆಯಂತಹ ಧಾರ್ಮಿಕ ಕಾರ್ಯ ನಡೆದು 7.30ಕ್ಕೆ ಸಂಪೂರ್ಣ ಅಲಂಕಾರ ಮುಗಿಯಲಿದೆ. ಬಳಿಕ ಮಹಾಮಂಗಳಾರತಿ ನಡೆಯಲಿದೆ. ಅನಂತರ ದೇವಾಲಯ ತೆರೆದಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸಂಜೆ 6.30ರಿಂದ ಮತ್ತೆ ವಿಶೇಷ ಅಭಿಷೇಕ ನಡೆಯಲಿದ್ದು, ರಾತ್ರಿ 8 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಿದೆ.

ಪ್ರಸಾದ ಹಂಚಲು ಅವಕಾಶವಿಲ್ಲ

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪ್ರತಿಕ್ರಿಯಿಸಿ ಶ್ರೀ ಚಾಮುಂಡೇಶ್ವರಿ ದೇವಾಲಯ, ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯ ಸೇರಿ ಜನಸಂದಣಿ ಸೇರುವ ದೇವಾಲಯಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. ಉಳಿದಂತೆ ಧಾರ್ಮಿಕ ದತ್ತಿ ಇಲಾಖೆಗೆ ಒಳ ಪಡುವ ಹಾಗೂ ಖಾಸಗಿ ಟ್ರಸ್ಟ್ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸಾದ ಹಂಚಲು ಅವಕಾಶವಿಲ್ಲ. ಸಾಮೂಹಿಕವಾಗಿ ಸೇರದೇ ಸಾರ್ವಜನಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯುವುದು ಕಡ್ಡಾಯ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: