ಪ್ರಮುಖ ಸುದ್ದಿವಿದೇಶ

ದೇಹದ ಬಹುಮುಖ್ಯ ಅಂಗಕ್ಕೆ ಹಾನಿಯನ್ನುಂಟು ಮಾಡಲಿದೆ ಮಹಾಮಾರಿ ಕೊರೊನಾ ವೈರಸ್!

ಲಂಡನ್​,ಜೂ.26-ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ತತ್ತರಿಸುತ್ತಿದೆ. ಈ ನಡುವೆ ವೈರಸ್ ಕುರಿತು ಮತ್ತೊಂದು ಆಘಾತಕಾರಿ ವಿಷಯವೊಂದು ಬಹಿರಂಗವಾಗಿದೆ.

ಅಧ್ಯಯನದ ಪ್ರಕಾರ ಕೊರೊನಾ ವೈರಸ್ ಬಹುಮುಖ್ಯ ಅಂಗ ಮೆದುಳಿಗೂ ಹಾನಿಯನ್ನುಂಟು ಮಾಡಲಿದೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿತ ರೋಗಿಯನ್ನು ಅಧ್ಯಯನ ನಡೆಸಿದಾಗ ಮೆದುಳಿಗೆ ಹಾನಿಯಾಗಿರುವುದು ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ.

ಮೆದುಳು ಹಾನಿಯಿಂದ ಪಾರ್ಶ್ವವಾಯು, ಉರಿಯೂತ, ಮನೋವಿಕಾರ ಮತ್ತು ಬುದ್ಧಿಮಾಂದ್ಯತೆಯಂತಹ ತೊಂದರೆಗಳು ಗಂಭೀರಾವಾದ ಪ್ರಕರಣಗಳಲ್ಲಿ ಎದುರಾಗಲಿದೆ ಎಂದು ಅಧ್ಯಯನ ತಿಳಿಸಿದೆ.

ಕೋವಿಡ್​-19 ನರವೈಜ್ಞಾನಿಕ ತೊಡಕುಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಲಾಗಿದ್ದು, ಕೊರೊನಾ ಕಾರ್ಯವಿಧಾನ ಪತ್ತೆಹಚ್ಚಲು ಮತ್ತು ಸೂಕ್ತ ಚಿಕಿತ್ಸೆಗಳ ಸಹಾಯಕ್ಕೆ ಇನ್ನು ಹೆಚ್ಚಿನ ಅಧ್ಯಯನಗಳ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು.

ಮೆದುಳು ಸಂಬಂಧಿತ ಕೋವಿಡ್​-19 ಸಂಕೀರ್ಣವು ತುಂಬಾ ಮಹತ್ವದ್ದಾಗಿದ್ದು, ಈ ಬಗ್ಗೆ ನಿರಂತರ ಮಾಹಿತಿ ಕಲೆಹಾಕಿ ವೈರಸ್​ ಬಗ್ಗೆ ಸಂಪೂರ್ಣ ಅಧ್ಯಯನ ಮಾಡುವುದು ತುಂಬಾ ಮುಖ್ಯವೆಂದು ಲಂಡನ್​ನ ಯೂನಿವರ್ಸಿಟಿ ಕಾಲೇಜಿನ ಪ್ರಾಧ್ಯಾಪಕರಾದ ಸಾರಾ ಪೆಟ್ ಹೇಳಿದ್ದಾರೆ.

ಪ್ರಾಥಮಿಕ ಅಧ್ಯಯನವು ಲ್ಯಾನ್ಸೆಟ್ ಸೈಕಿಯಾಟ್ರಿ ಜರ್ನಲ್​ನಲ್ಲಿ ಗುರುವಾರ ಪ್ರಕಟವಾಗಿದೆ. ಯುನೈಟೆಡ್​ ಕಿಂಗ್​ಡಮ್​ನ ಸುಮಾರು 125 ಕೊರೊನಾ ಪ್ರಕರಣಗಳನ್ನು ವಿವರವಾಗಿ ಅಧ್ಯಯನ ಮಾಡಲಾಗಿದೆ. ಏ.2 ಮತ್ತು ಏ.26ರ ಡಾಟಾವನ್ನು ಕಲೆಹಾಕಲಾಗಿದೆ. ಈ ಸಮಯದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಡಾಟಾ ಸಂಗ್ರಹಿಸಲಾಗಿದೆ.

ಒಟ್ಟು 125 ರೋಗಿಗಳಲ್ಲಿ 77 ಮಂದಿಯಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡಿದೆ. 60 ವರ್ಷ ಮೇಲ್ಪಟ್ಟ ರೋಗಿಗಳಲ್ಲಿ ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಗೆ ಕೊರೊನಾ ಕಾರಣವಾಗಿದೆ. 35 ಮಂದಿಯಲ್ಲಿ ವರ್ತನೆಯಲ್ಲಿ ಬದಲಾವಣೆ ಅಂದರೆ ಮನೋವಿಕಾರಕ್ಕೆ ಕಾರಣವಾಗಿದೆ. ಹೀಗಾಗಿ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಕೊರೊನಾದ ಜೈವಿಕ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಸಂಭವನೀಯ ಚಿಕಿತ್ಸೆ ಪತ್ತೆಗಾಗಿ ಮತ್ತಷ್ಟು ಆಳವಾದ ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು. (ಏಜೆನ್ಸೀಸ್​, ಎಂ.ಎನ್)

 

Leave a Reply

comments

Related Articles

error: