ಪ್ರಮುಖ ಸುದ್ದಿಮೈಸೂರು

ಹಣ ಚೆಲ್ಲಿ ಓಟು ಕೇಳಿದರೆ ನಾವು ಸುಮ್ಮನಿರುವುದಿಲ್ಲ :ಕಾಂಗ್ರೆಸ್‍ಗೆ ಬಿಎಸ್‍ಯಡಿಯೂರಪ್ಪ ಎಚ್ಚರಿಕೆ.

 ಕಾಂಗ್ರೆಸ್ನವರು ಒಳ್ಳೆ ಕೆಲಸಗಳನ್ನು ಮಾಡಿ ಓಟು ಕೇಳಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ರಾಜ್ಯವನ್ನು ಲೂಟಿ ಮಾಡಿ ಅದರಿಂದ ಗಳಿಸಿದ ಹಣವನ್ನು ಚೆಲ್ಲಿ ಓಟು ಕೇಳಿದರೆ ನಾವು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮದಲ್ಲಿ ಉಪ ಚುನಾವಣೆಯ ಅಂಗವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂಜನಗೂಡು ಕ್ಷೇತ್ರ ಸೇರಿದಂತೆ ಎಲ್ಲಿಯೂ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕಳಪೆ ಕಾಮಗಾರಿಗಳ ಮೂಲಕ ತೇಪೆ ಬಳಿಯುವ ಕೆಲಸ ಮಾಡಿಸುತ್ತಿದ್ದಾರೆ. `ಹಳೇ ಕಲ್ಲು ಹೊಸ ಬಿಲ್ಲುಎಂಬಂತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ರಾಜ್ಯವನ್ನು ಲೂಟಿ ಹೊಡೆದು ಹಗಲು ದರೋಡೆ ಮಾಡುತ್ತಿರುವ ಅವರನ್ನು ಜನರು, ರೈತರು ಕ್ಷಮಿಸುವುದಿಲ್ಲ. ರಾಜ್ಯವನ್ನು ಲೂಟಿ ಹೊಡೆದು ಗಳಿಸಿದ ಕಮಿಷನ್ ಹಣವನ್ನು ಚೆಲ್ಲಿ ಚುನಾವಣೆಯಲ್ಲಿ ಓಟು ಕೇಳಲು ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದರುಹಿಟ್ಲರ್ನನ್ನು ಮೀರಿಸಿದ ಸಿದ್ಧರಾಮಯ್ಯ ಹಣಬಲದಿಂದ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ತಮ್ಮ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ಸ್ಥಾನವಿಲ್ಲ ಎಂದು ತೋರಿಸಿದ ಸಿದ್ಧರಾಮಯ್ಯ ಅವರ ದುರಹಂಕಾರ, ಕೆಟ್ಟ ಆಡಳಿತ ವೈಖರಿಯಿಂದ ಬೇಸತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಂಥ ಹಿರಿಯ ನಾಯಕರೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುತ್ತಿದ್ದಾರೆ. ಜನರಿಗೂ ಸಹ ಸಿದ್ಧರಾಮಯ್ಯ ಅವರ ನಡವಳಿಕೆಯಿಂದ ಬೇಸರವಾಗಿದ್ದು ಇದೀಗ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಶ್ರೀನಿವಾಸ ಪ್ರಸಾದ್ ಅವರನ್ನು ಗೆಲ್ಲಿಸಲು ಸನ್ನದ್ಧರಾಗಿದ್ದಾರೆ ಎಂದರು.       . 

ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಡಿಮೆ ಬಡ್ಡಿಯ ಸಾಲ ಯೋಜನೆ, ಉಚಿತ ವಿದ್ಯುತ್, ಮಕ್ಕಳಿಗೆ ಸೈಕಲ್ ವಿತರಣೆ, ಹಾಲು ಉತ್ಪಾದನೆ, ಪ್ರೋತ್ಸಾಹಧನ ಮುಂತಾದ ಯೋಜನೆಗಳನ್ನು ನೀಡಿದ್ದೇವೆ. ಅಂದು ಕೇವಲ 45 ಸಾವಿರ ಕೋಟಿ ರೂ.ಗಳ ಬಜೆಟ್ ರೂಪಿಸಿ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡಿದ್ದೆವು. ಅದರೆ ಸಿದ್ಧರಾಮಯ್ಯ ತಾವೂ ಜನಪರ ಯೋಜನೆಗಳನ್ನು ರೂಪಿಸದೆ, ಕೇಂದ್ರದಿಂದ ನೀಡಲಾದ ಅನುದಾನವನ್ನೂ ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಹೇಗಾದರೂ ಆಡಳಿತ ನಡೆಸಬಹುದು ಎಂದು ಅವರು ಭಾವಿಸಿದ್ದಾರೆ ಎಂದು ಟೀಕಿಸಿದರು.  ಶ್ರೀನಿವಾಸ ಪ್ರಸಾದ್ ಅವರ ಗೆಲುವು ರಾಜ್ಯದಲ್ಲಿ ಬಿಜೆಪಿ ಭವಿಷ್ಯಕ್ಕೆ ಪೂರಕವಾಗಿರುತ್ತದೆ. ಆದ್ದರಿಂದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಅವರು ಮನವಿ ಮಾಡಿದರು

 ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದರೆ ರಾಜ್ಯವಾಳಲು ಆಗುತ್ತದೆಯೇ ಎಂದು ಬಿಎಸ್ವೈ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಛೇಡಿಸಿದರು.  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿ ಬಂದಾಗಲೂ ಸಹ ವಿಶ್ರಾಂತಿ ಪಡೆಯದೆ ಕಚೇರಿಗೆ ಬಂದು ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಆದರೆ ನೀವು ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದರೆ ರಾಜ್ಯವಾಳಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೇ ಪ್ರಧಾನಮಂತ್ರಿಗಳು ಹಗಲಿರುಳು ದುಡಿದರೆ ನಿಮಗೆ ಪುರುಸೊತ್ತೇ ಇಲ್ಲ ಎಂದು ಟೀಕಿಸಿದರು

ಸಭೆಯಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: