ಪ್ರಮುಖ ಸುದ್ದಿಮೈಸೂರು

ನಂಜನಗೂಡಿಗೆ ಪ್ರಕಟಿಸಿದ ಸಾಲಯೋಜನೆಗಳನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಿ : ಶೋಭಾ ಕರಂದ್ಲಾಜೆ

ಸಿದ್ಧರಾಮಯ್ಯ ಅವರ ದುರಹಂಕಾರ ಮತ್ತು ಜನವಿರೋಧಿ ನೀತಿಯಿಂದಾಗಿ ನಂಜನಗೂಡು ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಎದುರಾಗಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಗೆಲ್ಲಿಸುವ ಮೂಲಕ ಸಿದ್ಧರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಬೇಕು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಂಗವಾಗಿ ದೇಬೂರು ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭ್ರಷ್ಟಾಚಾರ ನಡೆಸುವ ಮೂಲಕ ಭಾರೀ ದೊಡ್ಡ ಪ್ರಮಾಣದಲ್ಲಿ ಹಣದ ಚೀಲಗಳನ್ನು ರವಾನಿಸುವವರು ಸಿದ್ಧರಾಮಯ್ಯ ಅವರಿಗೆ ಬೇಕು. ಶ್ರೀನಿವಾಸ ಪ್ರಸಾದ್ ಅವರಂಥ ಪ್ರಾಮಾಣಿಕರು ಬೇಕಾಗಿಲ್ಲ ಎಂದರು.

12 ಬಜೆಟ್‍ಗಳನ್ನು ಮಂಡಿಸಿದ್ದೇವೆಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಜನರಿಗೆ, ರೈತರಿಗೆ, ಮಹಿಳೆಯರಿಗೆ ಕೊಟ್ಟಿದ್ದೇನು? ಯಾವ ಅಹಿಂದ ಹೆಸರು ಹೇಳಿಕೊಂಡು ಮೇಲೆ ಬಂದರೋ ಆ ಸಮುದಾಯಗಳಿಗೆ ಅವರು ಕೊಟ್ಟಿದ್ದೇನು? ಬಹುಗ್ರಾಮ ನೀರಾವರಿ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಮಾತ್ರ ಕೊಟ್ಟು ಉಳಿದ ಕ್ಷೇತ್ರಗಳನ್ನು ಕಡೆಗಣಿಸಿದ ಅವರು ಚುನಾವಣೆ ಘೋಷಣೆಯಾದ ಮೇಲೆ ನಂಜನಗೂಡು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಸಾಲ ಯೋಜನೆಗಳನ್ನು ಪ್ರಕಟಿಸಿದ್ದಾರೆ. ನಿಜಕ್ಕೂ ಅವರಿಗೆ ಜನಪರ ಕಾಳಜಿ ಇದ್ದರೆ ಆ ಯೋಜನೆಗಳನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಿ. ಇಲ್ಲದಿದ್ದರೆ ಇಂಥ ಗಿಮಿಕ್ ರಾಜಕಾರಣ ಬಹಳ ದಿನ ನಡೆಯದು ಎಂದು ಹೇಳಿದರು.

ಮಾಜಿ ಸಚಿವರಾದ ವಿ.ಸೋಮಣ್ಣ  ಮಾತನಾಡಿ ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ದೊಂಬರಾಟಕ್ಕೆ ತೆರೆಯೆಳೆಯಲು ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀನಿವಾಸ ಪ್ರಸಾದ್ ಅವರನ್ನು ಗೆಲ್ಲಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಕಣಬದ್ಧರಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಹಣದಿಂದ ಮತದಾರರನ್ನು ಖರೀದಿಸಬಹುದು ಎಂಬ ಧೋರಣೆಯಿಂದ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್‍ನವರಿಗೆ ಪಾಠ ಕಲಿಸುವ ಮೂಲಕ ದಕ್ಷ, ಪ್ರಾಮಾಣಿಕರಾದ ಶ್ರೀನಿವಾಸ ಪ್ರಸಾದ್ ಅವರನ್ನು ಗೆಲ್ಲಿಸಲು ಮತದಾರರೂ ಸಹ ಬಿಜೆಪಿಯನ್ನು ಬೆಂಬಲಿಸಬೇಕು. ಇಲ್ಲಿ ಪ್ರಸಾದ್ ಗೆದ್ದರೆ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಉಳಿದ 223 ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿಗೆ ಅದು ವರದಾನವಾಗಲಿದೆ ಎಂದರು.

 ಯಡಿಯೂರಪ್ಪ ಮತ್ತು ಶ್ರೀನಿವಾಸ ಪ್ರಸಾದ್ ಒಂದಾದರೆ ಏನಾಗಬಹುದು ಎಂಬುದು ಸಿದ್ಧರಾಮಯ್ಯ ಅವರಿಗೆ ಈಗ ಅರ್ಥವಾಗಿದೆ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.  ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದೇಕೆ ಎಂಬ ನನ್ನ ಪ್ರಶ್ನೆಗೆ ಸಿದ್ಧರಾಮಯ್ಯ ಇದುವರೆಗೂ ಉತ್ತರ ನೀಡಿಲ್ಲ. ಅವರಿಗೆ ಪ್ರಾಮಾಣಿಕರು ಬೇಕಾಗಿಲ್ಲ. ಸೂಟ್ಕೇಸ್ ಗಿರಾಕಿಗಳು ಬೇಕು. ಕಾಂಗ್ರೆಸ್ ಹೈಕಮಾಂಡ್ನಲ್ಲಿರುವ ಭೂತ ಪ್ರೇತಗಳಿಗೆ ಕಪ್ಪ ಸಲ್ಲಿಸುವವರು ಬೇಕಾಗಿದ್ದಾರೆ. ಹೀಗಾಗಿ ಅವರ ಸಂಪುಟದಲ್ಲಿ ಈಗಿರುವವರೆಲ್ಲಾ ಕೋಟ್ಯಾಧೀಶ ಮಂತ್ರಿಗಳೇ. ಅವರೆಲ್ಲರನ್ನೂ ಕರೆತಂದು ನನ್ನೆದುರು ಪ್ರಚಾರಕ್ಕಿಳಿಸಲಿದ್ದಾರೆ. ಇಂಥ ನಂಬಿಕೆ ದ್ರೋಹಿಯನ್ನು, ಉಪಕಾರ ಸ್ಮರಣೆ ಇಲ್ಲದವರನ್ನು ಬಲಿಹಾಕಲು ಸರಿಯಾದ ಸಮಯ ಬಂದಿದೆ ಎಂದು ಅವರು ಹೇಳಿದರು

ಕಳಲೆ ಕೇಶವಮೂರ್ತಿ ಮಾಡಿದ್ದ ಸಾಲವನ್ನು ತೀರಿಸುವುದಾಗಿ ಹೇಳಿ ಅವರನ್ನು ಕರೆತಂದು ನನ್ನ ವಿರುದ್ಧ ಸ್ಪರ್ಧೆಗಿಳಿಸಿದ್ದಾರೆ. ನನಗೆ ಆದ ಅನ್ಯಾಯದ ಬಗ್ಗೆ ತಿಂಗಳುಗಟ್ಟಲೆ ನಾನು ಮಾತನಾಡಿದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ಧರಾಮಯ್ಯ ಚುನಾವಣೆ ಘೋಷಣೆಯಾದ ಮೇಲೆ ಮಾತನಾಡಲು ಆರಂಭಿಸಿದ್ದಾರೆ ಎಂದು ಹೇಳಿದರು

ಉತ್ತರ ಪ್ರದೇಶದಂಥ ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಮುಖ್ಯಮಂತ್ರಿ ಯಾರೆಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ದೃಢ ಸರ್ಕಾರ ರಚಿಸಿ ಉತ್ತಮ ಆಡಳಿತ ನೀಡುವ ಹಂಬಲ ನಮಗೆಲ್ಲರಿಗೂ ಇದೆ. ಇದಕ್ಕಾಗಿ ಜನರು ಬೆಂಬಲಿಸುವ ಮೂಲಕ ಸಹಕಾರ ನೀಡಬೇಕು ಎಂದ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಾವು ಸಿಡಿದು ನಿಲ್ಲುತ್ತೇವೆಂಬ ಸಂದೇಶ ಚಾಮರಾಜನಗರದಿಂದ ಬೀದರ್ವರೆಗೂ ರವಾನೆಯಾಗಬೇಕು ಎಂದರು

ಮಲ್ಲಿಕಾರ್ಜುನ ಖರ್ಗೆ ಅವರು ತಂಜಾವೂರಿನ ಬೊಂಬೆಗಳಂತೆ ಇದ್ದಾರೆ ಎಂದ ಶ್ರೀನಿವಾಸ ಪ್ರಸಾದ್ ಸಂಸತ್ನಲ್ಲಿ ವಿಪಕ್ಷ ನಾಯಕರಾಗಿರುವ ಖರ್ಗೆ ಅವರು ಯಾರೇ ಮುಖ್ಯಮಂತ್ರಿಯಾದರೂ ಅಧಿಕಾರ ಪಡೆದುಕೊಳ್ಳುತ್ತಾರೆ. ಅವರು ಹೇಗೆ ಎಸೆದರೂ ನೆಟ್ಟಗೇ ನಿಲ್ಲುವ ತಂಜಾವೂರು ಬೊಂಬೆಯಿದ್ದಂತೆ ಎಂದು ವ್ಯಂಗ್ಯವಾಡಿದರು

ಸಭೆಯಲ್ಲಿ ಬಿಜೆಪಿಯ ವಿವಿಧ ಘಟಕಗಳ ಮುಖಂಡರಾದ ಡಿ.ಎಸ್.ವೀರಯ್ಯ, ಕೆ.ಆರ್.ಮೋಹನ್‍ಕುಮಾರ್, ಬಿ.ಪಿ.ಬೋರೇಗೌಡ, ಕೆ.ಕೆ.ಜಯದೇವ್, ಎಸ್.ಮಹದೇವಯ್ಯ, ಶಂಕರೇಗೌಡ ಪಾಟೀಲ್, ಎನ್.ವಿ.ಫಣೀಶ್, ಜಗದೀಶ್ ಹಿರೇಮನಿ, ಮಲ್ಲಾಡಿ ನಾಗರಾಜ್, ನೀರಜ್ ಪಾಟೀಲ್, ಬಿ.ಎಂ.ರಾಮು, ಕಾ.ಪು.ಸಿದ್ಧಲಿಂಗಸ್ವಾಮಿ, ಡಾ.ಶಿವರಾಂ, ದಯಾನಂದ ಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.  (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: