ಕರ್ನಾಟಕಪ್ರಮುಖ ಸುದ್ದಿ

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಬಿಎಸ್ವೈ

ಬೆಂಗಳೂರು,ಜೂ.27-ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುತ್ತಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಹಾಗೂ ಥೀಮ್ ಪಾರ್ಕ್ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಬಿಎಸ್ವೈ ಅವರು, ಬೆಂಗಳೂರನ್ನು ಯೋಜನಾಬದ್ಧವಾಗಿ ಬೆಳೆಸಲು ಕೆಂಪೇಗೌಡರ ಕೊಡುಗೆ ಅಪಾರ. ನದಿ ಮೂಲ ಇಲ್ಲದ ಬೆಂಗಳೂರಿನಲ್ಲಿ ನೂರಾರು ಕೆರಗಳ ನಿರ್ಮಾಣ ಮಾಡಿದರು. ಬೆಂಗಳೂರು ನಗರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ ಎಂದರು.

ಚಿಕ್ಕಪೇಟೆ, ಅಕ್ಕಿಪೇಟೆ ಸೇರಿದಂತೆ ಅಂದು ಕೆಂಪೇಗೌಡರು ನಿರ್ಮಾಣ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಇವೆಲ್ಲವೂ ವಾಣಿಜ್ಯ ಕೇಂದ್ರಗಳಾಗಿವೆ. ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರ್ಕಾರ ಶ್ರಮಿಸುತ್ತಿದೆ, ಮುಂದಿನ ಒಂದು ವರ್ಷದಲ್ಲಿ 108 ಅಡಿಯ ಪ್ರತಿಮೆ ನಿರ್ಮಿಸಿ ಅದರ ಉದ್ಘಾಟನೆಗೆ ಎಲ್ಲರನ್ನೂ ಕರೆಯೋಣ ಎಲ್ಲರೂ ಸೇರೋಣ ಎಂದು ಹೇಳಿದರು.

ಜೊತೆಗೆ ಇಂದು 23 ಎಕರೆ ವಿಸ್ತೀರ್ಣದಲ್ಲಿ ಸೆಂಟ್ರಲ್ ಪಾರ್ಕ್ ಕಾಮಗಾರಿಗೂ ಚಾಲನೆ ದೊರೆತಿದೆ. ಭೂಮಿಪೂಜೆ ನೆರೆವೇರಿದ ಒಂದೇ ವರ್ಷದಲ್ಲಿ ಇಡೀ ಕಾಮಗಾರಿಯನ್ನು ಮುಗಿಸಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುವುದು. ಈ ಯೋಜನೆಗೆ ಒಟ್ಟು 78 ಕೋಟಿ ರೂಪಾಯಿ ವೆಚ್ಚವಾಗುತ್ತಿದದ್ದು. ಯೋಜನೆ ಪೂರ್ಣಗೊಂಡ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರದವರೇ ನಿರ್ವಹಣೆ ಮಾಡಲಿದ್ದಾರೆ ಎಂದರು.

ಪ್ರತಿಮೆ ಎತ್ತರವನ್ನು ವೈಜ್ಞಾನಿಕವಾಗಿ 108 ಅಡಿಗೆ ನಿಗದಿ ಮಾಡಲಾಗಿದೆ. ವಿಧಾನಸೌಧ-ವಿಕಾಸಸೌಧ ನಡುವೆ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ, ಗುಜರಾತ್ ರಾಜ್ಯದ ನರ್ಮದಾ ನದಿ ತೀರದಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ತಯಾರಿಸಿರುವ ಖ್ಯಾತ ಶಿಲ್ಪಿ ರಾಮಸುತಾರ ಅವರೇ ಕೆಂಪೇಗೌಡರ ಪ್ರತಿಮೆ ವಿನ್ಯಾಸ ಸಿದ್ಧಪಡಿಸುತ್ತಿದ್ದಾರೆ. ಜತೆಗೆ ಕೆಂಪೇಗೌಡರು ಮತ್ತು ಬೆಂಗಳೂರಿನ ಇತಿಹಾಸಕ್ಕೆ ಚ್ಯುತಿ ಬಾರದಂತೆ ಐಡೆಕ್ ಸಂಸ್ಥೆ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಮಾಹಿತಿ ನೀಡಿದರು.

ತಮ್ಮ ಪ್ರಖರ ದೂರದೃಷ್ಟಿಯಿಂದ 500 ವರ್ಷಗಳ ಹಿಂದೆಯೇ ಎಲ್ಲ ಜಾತಿ ಧರ್ಮದವರಿಗೂ ಸಲ್ಲುವ ಬೆಂಗಳೂರಿನಂಥ ಆಧುನಿಕ ಮಹಾನಗರವನ್ನು ಕಟ್ಟಿದ ಮಹಾಪುರುಷನನ್ನು ಮುಂದಿನ ತಲೆಮಾರಿಗೂ ಪರಿಚಯಿಸಬೇಕೆಂಬ ಏಕೈಕ ಉದ್ದೇಶದಿಂದ ಈ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಎಚ್‌ಡಿ ದೇವೇಗೌಡ, ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗ ಮಠದ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಶ್ರೀ ದೇಶೀಕೇಂದ್ರ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಗೋಪಾಲಯ್ಯ, ಬೈರತಿ ಬಸವರಾಜು, ಸಂಸದ ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸುರೇಶ್ ಅಂಗಡಿ, ನಟ ಪುನೀತ್ ರಾಜ್‌ಕುಮಾರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: