ಮೈಸೂರು
ಕೆಟ್ಟು ನಿಂತ ಮೆಷಿನ್ : ನರಕಯಾತನೆ ಅನುಭವಿಸುತ್ತಿರುವ ಡಯಾಲಿಸಿಸ್ ಪೇಷಂಟ್ ಗಳು
ಮೈಸೂರು,ಜೂ.27:- ಮಹಾಮಾರಿ ಕೊರೋನಾ ಆರ್ಭಟದಲ್ಲಿ ಡಯಾಲಿಸಿಸ್ ರೋಗಿಗಳ ನರಳಾಟ ಆರಂಭವಾಗಿದೆ. ಸತತ ಒಂದು ತಿಂಗಳುಗಳಿಂದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗೆ ಸಂಬಂಧಿಸಿದ ಮಿಷನ್ ಕೆಟ್ಟುನಿಂತಿದ್ದು ಡಯಾಲಿಸಿಸ್ ರೋಗಿಗಳು ತಿಂಗಳುಗಳಿಂದ ನರಕಯಾತನೆ ಅನುಭವಿಸುತ್ತಿರುವ ಘಟನೆ ಹೆಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಡಯಾಲಿಸಿಸ್ ಸಮಸ್ಯೆ ನಿವಾರಣೆ ಮೆಷಿನ್ ಒಂದು ತಿಂಗಳುಗಳಿಂದ ಕೆಟ್ಟು ನಿಂತು ಸ್ಥಗಿತಗೊಂಡಿದೆ. ಹೆಚ್ ಡಿ ಕೋಟೆ ತಾಲೂಕಿನಲ್ಲಿ ಒಟ್ಟು ಹದಿನೈದಕ್ಕೂ ಹೆಚ್ಚು ಡಯಾಲಿಸಿಸ್ ಸಮಸ್ಯೆ ರೋಗಿಗಳಿದ್ದಾರೆ. ತಿಂಗಳುಗಳಿಂದ ಕೆಟ್ಟು ನಿಂತಿರುವ ಡಯಾಲಿಸಿಸ್ ಮೆಷಿನ್ ನಿಂದ ರೋಗಿಗಳು ದಿನನಿತ್ಯ ಆಹಾರ ಬಿಟ್ಟು ನರಳಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಪ್ರತಿ ಬಾರಿಯೂ ಐದರಿಂದ ಹತ್ತು ಸಾವಿರ ರೂ.ಗಳ ದುಬಾರಿ ಬೆಲೆ ತೆರಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಮಾಡಿಸಬೇಕಾದರೆ ನಂಜನಗೂಡು ಮೈಸೂರು ಅಥವಾ ನರಸೀಪುರಕ್ಕೆ ತೆರಳಿ ಎಂದು ಆಸ್ಪತ್ರೆ ಸಿಬ್ಬಂದಿಗಳು ಸಬೂಬು ಹೇಳುತ್ತಾರೆ. ಸ್ಥಳೀಯ ಶಾಸಕರ ಗಮನಕ್ಕೂ ಹಲವಾರು ಬಾರಿ ಕೆಟ್ಟುನಿಂತ ಮೆಷನ್ ಬಗ್ಗೆ ವಿವರ ತಿಳಿಸಲಾಗಿದೆ. ಶಾಸಕರಾಗಲಿ ಅಥವಾ ಜಿಲ್ಲಾಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಕೆಟ್ಟು ನಿಂತಿರುವ ಮೆಷಿನ್ ಸರಿಪಡಿಸಲು ಮುಂದಾಗಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.
ಮಹಾಮಾರಿ ಕೊರೋನಾದ ನಡುವೆ ಡಯಾಲಿಸಿಸ್ ಸಮಸ್ಯೆಯಿಂದ ನರಳಾಡುತ್ತಿರುವ ರೋಗಿಗಳ ರಕ್ಷಣೆಗೆ ಯಾರು ಮುಂದಾಗುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. (ಕೆ.ಎಸ್,ಎಸ್.ಎಚ್)