ದೇಶಪ್ರಮುಖ ಸುದ್ದಿ

ಕೊರೊನಾ ಸೋಂಕಿತರ ಚಿಕಿತ್ಸೆಗೆ ಡೆಕ್ಸಾಮೆಥಾಸೊನ್ ಸ್ಟಿರಾಯ್ಡ್: ಕೇಂದ್ರದಿಂದ ಅನುಮತಿ

ನವದೆಹಲಿ,ಜೂ.27-ಕೊರೊನಾ ವೈರಸ್ ಸೋಂಕಿನಿಂದ ತೀವ್ರವಾಗಿ ಬಾಧಿತರಾಗಿರುವ ರೋಗಿಗಳ ಚಿಕಿತ್ಸೆಗೆ ಡೆಕ್ಸಾಮೆಥಾಸೊನ್ ಸ್ಟಿರಾಯ್ಡ್ ಬಳಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಡೆಕ್ಸಾಮೆಥಾಸೊನ್ ಸ್ಟಿರಾಯ್ಡ್ ಪರಿಣಾಮಕಾರಿ ಎಂಬುದು ಪ್ರಯೋಗಾಲಯಗಳಿಂದ ಸಾಬೀತಾದ ಹಿನ್ನಲೆಯಲ್ಲಿ ಅದನ್ನು ಬಳಸಲು ಅನುಮತಿ ನೀಡಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕೋವಿಡ್ -19 ಗಂಭೀರ ರೋಗಿಗಳಿಗೆ ಸ್ಟೀರಾಯ್ಡ್ ಮೀಥೈಲ್‌ಪ್ರೆಡ್ನಿಸೋಲೋನ್‌ಗೆ ಪರ್ಯಾಯವಾಗಿ ಡೆಕ್ಸಾಮೆಥಾಸೊನ್ ನೀಡಬಹುದು ಎಂದು ಹೇಳಿದೆ. ಮೀಥೈಲ್‌ಪ್ರೆಡ್ನಿಸೋಲೋನ್‌ ಅನ್ನು ಬಹಳ ಹಿಂದೆಯೇ ಕ್ಲಿನಿಕಲ್ ಪ್ರೋಟೋಕಾಲ್‌ನಲ್ಲಿ ಸೇರಿಸಲಾಗಿದೆ.

ಕೊರೊನಾ ವೈರಸ್ ಗೆ ಕಡಿಮೆ ಡೋಸ್‌ನ ಸ್ಟಿರಾಯ್ಡ್‌ ‘ಡೆಕ್ಸಾಮೆಥಾಸೊನ್‌’ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಆಕ್ಸ್ ಫರ್ಡ್ ವಿವಿ ಸಂಶೋಧಕರು ಹೇಳಿದ 10 ದಿನಗಳ ನಂತರ ಭಾರತ ಅದನ್ನು ಒಪ್ಪಿಕೊಂಡಿದೆ.

ಡೆಕ್ಸಾಮೆಥಾಸೊನ್‌ ಬಳಕೆಯಿಂದ ವೆಂಟಿಲೇಟರ್‌ನಲ್ಲಿರುವ ರೋಗಿಗಳಲ್ಲಿ ಮೂರರಲ್ಲಿ ಒಬ್ಬರ ಜೀವ ಉಳಿಯುತ್ತದೆ. ಇನ್ನು ಆಕ್ಸಿಜನ್‌ ಸಂಪರ್ಕದಲ್ಲಿ ಇರುವವರಲ್ಲಿ ಐವರಲ್ಲಿ ಒಬ್ಬರ ಜೀವ ಉಳಿಯಲಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಸಂಶೋಧಕರು ಕೊರೊನಾದಿಂದ ತೀವ್ರ ಬಾಧಿತರಾಗಿದ್ದ 2000ಕ್ಕೂ ಅಧಿಕ ರೋಗಿಗಳ ಮೇಲೆ ಡೆಕ್ಸಾಮೆಥಾಸೊನ್ ಅನ್ನು ಪ್ರಯೋಗ ಮಾಡಿದ್ದರು. (ಎಂ.ಎನ್)

 

Leave a Reply

comments

Related Articles

error: