ಮೈಸೂರು

ಕೊರೋನಾ ವೈರಸ್ ರೋಗಾಣು ಹರಡುವುದನ್ನು ತಡೆಗಟ್ಟಲು   ನಗರದಲ್ಲಿ  ನಿಷೇಧಾಜ್ಞೆ  ಮುಂದುವರಿಕೆ

ಮೈಸೂರು,ಜೂ.29:- ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ. ಸಾರ್ವಜನಿಕರು ಸಾಮಾಜಿಕ ಸ್ಥಳಗಳಲ್ಲಿ ಒಟ್ಟಿಗೇ ಸೇರುವುದರಿಂದ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಕೈಗೊಂಡಿರುವ ಎಲ್ಲಾ ಕ್ರಮಗಳು ನಿರರ್ಥಕವಾಗುತ್ತವೆ. ಆದ್ದರಿಂದ, ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ   ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ, ಸಾರ್ವಜನಿಕರು ಒಟ್ಟಾಗಿ ಸೇರುವುದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸುವುದು ಅಗತ್ಯವೆಂದು ಮನಗಂಡು ಪೊಲೀಸ್ ಆಯುಕ್ತರಾದ ಡಾ.| ಚಂದ್ರಗುಪ್ತ  ನಿಷೇದಾಜ್ಞೆಯನ್ನು ಹೊರಡಿಸಿದ್ದಾರೆ.

05/07/2020 ರಿಂದ   02/08/2020 ರವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣದಿನದ ಲಾಕ್‍ಡೌನ್ ಇರುತ್ತದೆ. ಆದರೆ, ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪ್ರತಿದಿನ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಪಾಲಿಸಬೇಕಾಗಿರುವುದರಿಂದ ಸಾರ್ವಜನಿಕರು 8 ಗಂಟೆಯ ಒಳಗೆ ತಮ್ಮ ತಮ್ಮ ವಾಸಸ್ಥಾನ ತಲುಪುವ ಅನಿವಾರ್ಯತೆ ಇರುತ್ತದೆ. ಆದುದರಿಂದ, ಮೈಸೂರ ನಗರದಾದ್ಯಂತ ಸಂಜೆ 07.30 ರ ಹೊತ್ತಿಗೆ ಸಾರ್ವಜನಿಕರು ಎಲ್ಲಾ ವ್ಯಾಪಾರ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಈ ಆದೇಶವು ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವ ಮಳಿಗೆಗಳಿಗೆ ಅನ್ವಯಿಸುವುದಿಲ್ಲ.  ಈ ಆದೇಶವು – ತುರ್ತು ವೈದ್ಯಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು/ ಕರ್ತವ್ಯ ನಿರತ ಸರ್ಕಾರಿ ನೌಕರರ ವಾಹನಗಳು, ಹಾಪ್‍ಕಾಮ್ಸ್, ಪಡಿತರ, ಆಹಾರ ಪದಾರ್ಥಗಳ ಹೋಂ ಡೆಲಿವರಿ, ಕಿಚನ್ ಸೇವೆಗಳು (ರಾತ್ರಿ 9  ಗಂಟೆಯ ವರೆಗೆ ಮಾತ್ರ) ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: