ಮೈಸೂರು

ಶಿಕ್ಷಣ ಕೇಂದ್ರ ವ್ಯಾಪಾರೀಕರಣದ ಕೇಂದ್ರವಾಗದೆ ಮೌಲ್ಯಾಧಾರಿತ ಶಿಕ್ಷಣ ನೀಡಲಿ : ಧರ್ಮಪುರ ನಾರಾಯಣ್

ಬೈಲಕುಪ್ಪೆ: ಶಿಕ್ಷಣ ಕ್ಷೇತ್ರವು ವ್ಯವಸ್ಥೆಯೊಳಗಡೆ ಏನಾದರೂ ಕಲುಷಿತಗೊಂಡರೆ ಸಮಾಜವೇ ಬುಡಮೇಲಾಗಲಿದೆ ಆದ್ದರಿಂದ  ಶಿಕ್ಷಣ ಕೇಂದ್ರಗಳು ವ್ಯಾಪಾರೀಕರಣದ ಕೇಂದ್ರವಾಗದೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಕ್ಷೇತ್ರಗಳಾಗಿ ರೂಪುಗೊಳ್ಳಬೇಕು ಎಂದು   ಮೈಸೂರು ಜಿಲ್ಲಾ ರೋಟರಿ ಜಿಲ್ಲಾ 3181 ಅಧ್ಯಕ್ಷ ಧರ್ಮಪುರ ನಾರಾಯಣ್ ಹೇಳಿದರು.

ಸಮೀಪದ ಭಾರತಮಾತಾ ಶಿಕ್ಷಣ ಸಂಸ್ಥೆ ವತಿಯಿಂದ ಸುಮಾರು ರೂ. 3 ಕೋಟಿ ವೆಚ್ಚದಲ್ಲಿ ಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಸಮುದಾಯ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯುವಂತಹ ಅವಕಾಶವನ್ನು ಕಲ್ಪಿಸುವುದರ ಜೊತಗೆ ಅವರ ಶೈಕ್ಷಣಿಕ ಪ್ರಗತಿಗೆ ಭಾರತಮಾತ ಶಿಕ್ಷಣ ಸಂಸ್ಥೆ ವಿಶೇಷ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಭಾರತಮಾತ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳ ಆಶಾಕಿರಣವಾಗಿ ರೂಪುಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಸೇಂಟ್ ಥಾಮಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರೆ.ಫಾ. ಸಂತೋಷ್ ಕುರಿಯಾನ್ ಮಾತನಾಡಿ, ಪ್ರತಿಯೊಬ್ಬರಿಗೂ ಮಾನವೀಯ ಮೌಲ್ಯ ಮತ್ತು ಗುಣಮಟ್ಟದ ಶಿಕ್ಷಣ ತುಂಬ ಅಗತ್ಯವಾಗಿದೆ. ವಿದ್ಯಾರ್ಥಿಯಾದವರು ಜ್ಞಾನದ ಜೊತಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.

ಬೆಂಗಳೂರು ಕ್ರೈಸ್ಟ್ ಐಸಿಎಸ್‍ಸಿ ಶಾಲಾ ಪ್ರಾಂಶುಪಾಲ ರೆ.ಫಾ. ಅಗಸ್ಟೀನ್ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಕನಸು ಕಂಡು ಸತತ ಪ್ರಯತ್ನ ಮಾಡಿದಾಗ ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಕೊಪ್ಪ ಬಿಎಂಡಿಸಿ ನಿಕಟಪೂರ್ವ ಪ್ರಾಂಶುಪಾಲ ರೆ.ಫಾ.ಜೊಮಾನ್ ಕೆ.ಜೋಸೆಫ್ ಮಾತನಾಡಿ, ವಿದ್ಯಾಕೇಂದ್ರಗಳು  ದೇವಾಲಯವಿದ್ದಂತೆ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಮೌಲ್ಯಯುತವಾದ ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದರು.

ಭಾರತಮಾತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಸೀಬು ಸಭಾಸ್ಟಿನ್ ಅಧ್ಯಕ್ಷತೆ ವಹಿಸಿದ್ದರು.

ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿರಾಮಣ್ಣ, ಜಿಲ್ಲಾ ಪಂಚಾಯತ್ ಸದಸ್ಯ ವಿ. ರಾಜೇಂದ್ರ, ಧರ್ಮಪುರ ನಾರಾಯಣ್ ವಿವಿಧ ಸರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭ ಭಾರತಮಾತ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ.ರೇನ್ನಿಜಾನ್, ಕೊಪ್ಪ ಗ್ರಾ.ಪಂ.ಸದಸ್ಯರಾದ ಚಿಕ್ಕಮ್ಮ, ಪೂರ್ಣಿಮ ಶ್ರೀಕಾಂತ, ಉಷಾರಮೇಶ್, ಪದ್ಮ, ಹುಣಸೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಧರ್ಮಪುರ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.  (ಆರ್.ಬಿ.ಆರ್ -ಎಸ್.ಎಚ್)

Leave a Reply

comments

Related Articles

error: