ಪ್ರಮುಖ ಸುದ್ದಿಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ  ವಿರುದ್ದ ಮಾನನಷ್ಟ ಮೊಕದ್ದಮೆಗೆ ಯಡಿಯೂರಪ್ಪ ಚಿಂತನೆ

ನಾನು ನಿರ್ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದರೂ ಸಹ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನ್ನನ್ನು ಜೈಲಿಗೆ ಹೋಗಿ ಬಂದವನು ಎಂದು ಹೇಳುತ್ತಾ ಬಹಿರಂಗವಾಗಿ ಅವಮಾನಿಸುತ್ತಿದ್ದು ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬದನವಾಳು ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಪರ ಪ್ರಚಾರ ನಡೆಸಲು ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ನನ್ನ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗಿತ್ತು. ಆದರೆ ನ್ಯಾಯಾಲಯ ನಾನು ನಿರ್ದೋಷಿ ಎಂದು ಹೇಳಿವೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಂಸದ ಧೃವನಾರಾಯಣ್ ಅವರು ಈಗಲೂ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು  ಹೇಳಿದರು.
1927ರಲ್ಲಿ ಮತ್ತು 1931ರಲ್ಲಿ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ ಬದನವಾಳು ಗ್ರಾಮವು ಇನ್ನೂ ಹಲವಾರು ಕಾರಣಗಳಿಗೆ ಮಹತ್ವ ಹೊಂದಿದ ಪುಣ್ಯಭೂಮಿ ಹಾಗೂ ಕರ್ಮಭೂಮಿಯಾಗಿದೆ. ಗಾಂಧೀಜಿ ಅವರ ಆಶಯದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಹೆಣ್ಣುಮಕ್ಕಳು ಸ್ವಾಭಿಮಾನದಿಂದ, ಗೌರವದಿಂದ ಬಾಳಲು ಅಗತ್ಯವಾದ ಸವಲತ್ತುಗಳನ್ನು ನೀಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆಯು ಇಡೀ ದೇಶದಲ್ಲೇ ಮಾದರಿಯ ದಾಖಲೆಯ ಕಾರ್ಯಕ್ರಮವಾಗಿತ್ತು. ಆದರೆ ಈಗಿನ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆ ಯೋಜನೆಯನ್ನು ನಿರ್ಲಕ್ಷ್ಯಿಸಿದೆ ಎಂದು ಅವರು ಟೀಕಿಸಿದರು.
ರೈತರ ಸಾಲ ಮನ್ನಾ ಮಾಡಿ ಎಂದರೆ ಸಿದ್ಧರಾಮಯ್ಯ ನರೇಂದ್ರ ಮೋದಿ ಅವರೆಡೆಗೆ ಕೈ ತೋರಿಸುತ್ತಾರೆ. ಅವರು ಮಾಡಲಾಗದಿದ್ದರೆ ಬೇಡ. ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೊಡನೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯ ವಿಧಾನಸಭಾ ಅಧಿವೇಶನ ಮುಗಿದೊಡನೆ ರಾಜ್ಯದಲ್ಲಿ ಕಂಡು ಬಂದಿರುವ ಬರ ಪರಿಸ್ಥಿತಿಯ ಅಧ್ಯಯನ ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮಂತ್ರಿಗಳು, ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಬೇಕಿತ್ತು. ಆದರೆ ಅವರೆಲ್ಲರನ್ನೂ ಸಿದ್ಧರಾಮಯ್ಯ ನಂಜನಗೂಡು ಮತ್ತು ಗುಂಡ್ಲುಪೇಟೆಗೆ ಕರೆತಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದು ಅವರಿಗೆ ಜನಪರ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ ಎಂದು  ಟೀಕಿಸಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಸೇರಿದಂತೆ ಹಲವಾರು ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಯಡಿಯೂರಪ್ಪ  ಬಿಜೆಪಿ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.
ಸಮಾರಂಭದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್, ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: