
ದೇಶಪ್ರಮುಖ ಸುದ್ದಿ
ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ: ಮೋದಿ ಸೇರಿದಂತೆ ಗಣ್ಯರಿಂದ ವೈದ್ಯರಿಗೆ ಧನ್ಯವಾದ
ನವದೆಹಲಿ,ಜು.1-ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮಾನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ವೈದ್ಯ ಸಮೂಹಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.
ಪ್ರಧಾನಿ ಮೋದಿ, ಕೋವಿಡ್-19 ವಿರುದ್ಧದ ಉತ್ಸಾಹಭರಿತವಾಗಿ ಹೋರಾಟ ಮಾಡುತ್ತಿರುವ ನಮ್ಮ ವೈದ್ಯರಿಗೆ ಹಾಗೂ ಅವರ ಅಸಾಧಾರಣ ಕಾರ್ಯಕ್ಕೆ ಭಾರತ ವಂದಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಲೆಕ್ಕ ಪರಿಶೋಧಕರ ದಿನವೂ ಆಗಿರುವುದರಿಂದ ಮೋದಿ ಅವರು ಇವರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಆರೋಗ್ಯಕರ ಮತ್ತು ಪಾರದರ್ಶಕ ಆರ್ಥಿಕತೆಯನ್ನು ಖಾತರಿಪಡಿಸುವಲ್ಲಿ ಶ್ರಮಜೀವಿಗಳಾದ ಲೆಕ್ಕ ಪರಿಶೋಧಕರು ಮಹತ್ವದ ಪಾತ್ರ ವಹಿಸುತ್ತಾರೆ. ಸಮಾಜದ ಆರ್ಥಿಕ ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುವ ಹೊಣೆ ಈ ಸಮುದಾಯದ ಮೇಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಮನಾಥ್ ಕೋವಿಂದ್ ಅವರು, ವೈದ್ಯರ ದಿನಾಚರಣೆ ಸಂದರ್ಭದಲ್ಲಿ ಎಲ್ಲಾ ವೈದ್ಯರಿಗೆ ಶುಭಾಶಯಗಳು. COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ವೈದ್ಯರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕಾಗಿ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಸಹವರ್ತಿ ನಾಗರಿಕರ ಸೇವೆಯಲ್ಲಿ ನಿಮ್ಮ ವೃತ್ತಿಪರತೆ ಮತ್ತು ತ್ಯಾಗವನ್ನು ರಾಷ್ಟ್ರವು ಮೆಚ್ಚುತ್ತದೆ ಮತ್ತು ವಂದಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಎಂ.ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ, ಮಾನವೀಯತೆಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ರಾಷ್ಟ್ರ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯ ದಿನಾಚರಣೆಯ ಶುಭಾಶಯಗಳು. ಈ ವೈದ್ಯರ ದಿನದಂದು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಪೌರಾಣಿಕ ವೈದ್ಯರಾದ ಡಾ.ಬಿ.ಸಿ.ರಾಯ್ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ರಾಯ್ ಅವರು ಭಾರತದ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಅಮಿತ್ ಶಾ ಟ್ವೀಟ್ ಮಾಡಿ, ವೈದ್ಯರ ದಿನದಂದು, ಕೋವಿಡ್-19 ವಿರುದ್ಧದ ಮುಂಚೂಣಿಯಲ್ಲಿರುವ ನಮ್ಮ ಕೆಚ್ಚೆದೆಯ ವೈದ್ಯರಿಗೆ ನಮಸ್ಕರಿಸುತ್ತೇನೆ. ಈ ಸಂಕಷ್ಟದ ಕಾಲದಲ್ಲಿ ರಾಷ್ಟ್ರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಅವರ ಸಂಪೂರ್ಣ ಬದ್ಧತೆ ನಿಜಕ್ಕೂ ಅಸಾಧಾರಣವಾಗಿದೆ. ರಾಷ್ಟ್ರವು ಅವರ ಭಕ್ತಿ ಮತ್ತು ತ್ಯಾಗಕ್ಕೆ ನಮಸ್ಕರಿಸುತ್ತೇವೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ, ವೈದ್ಯರ ದಿನದಂದು, ಕೋವಿಡ್-19 ಸಂದರ್ಭದಲ್ಲಿ ಭರವಸೆಯನ್ನು ಮೂಡಿಸಿರುವ ಸಮರ್ಪಿತ ವೃತ್ತಿಪರರಿಗೆ ನಾನು ಅಪಾರ ಕೃತಜ್ಞನಾಗಿದ್ದೇನೆಂದಿದ್ದಾರೆ. (ಎಂ.ಎನ್)