ಪ್ರಮುಖ ಸುದ್ದಿವಿದೇಶ

ಇರಾನ್ ನ ಮೆಡಿಕಲ್ ಕ್ಲಿನಿಕ್ ನಲ್ಲಿ ಸ್ಫೋಟ: 19 ಮಂದಿ ದುರ್ಮರಣ

ತೆಹ್ರಾನ್​,ಜು.1- ಇರಾನ್​ನ ತೆಹ್ರಾನ್ ಉತ್ತರ ಭಾಗದಲ್ಲಿರುವ ಮೆಡಿಕಲ್ ಕ್ಲಿನಿಕ್​ನಲ್ಲಿ ಸ್ಫೋಟ ಸಂಭವಿಸಿ 19 ಮಂದಿ ಸಾವಿಗೀಡಾಗಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣ ಎಂದು ತೆಹ್ರಾನ್​ ಡೆಪ್ಯುಟಿ ಗವರ್ನರ್​ ಹಮೀದ್​ ರೆಜಾ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ. ತೆಹ್ರಾನ್​ನ ಸಿನಾ ಅಟ್ಟರ್ ಮೆಡಿಕಲ್ ಕೇಂದ್ರದಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ.

ನಿನ್ನೆ ರಾತ್ರಿ 9 ಗಂಟೆಗೆ ಕ್ಲಿನಿಕ್ ನಲ್ಲಿ ಸ್ಫೋಟ ಸಂಭವಿಸಿತ್ತು. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟಗೊಂಡ ಸಮಯದಲ್ಲಿ ಕ್ಲಿನಿಕ್​ನಲ್ಲಿ ಒಟ್ಟು 25 ಮಂದಿ ಇದ್ದರು ಎಂದು ತಿಳಿದುಬಂದಿದೆ. ಸ್ಫೋಟದಿಂದಾಗಿ ಇಡೀ ಕಟ್ಟಡವೇ ಹೊತ್ತಿ ಉರಿದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೀಡುಬಿಟ್ಟಿದ್ದು, ಈಗಾಗಲೇ ಬೆಂಕಿಯನ್ನು ನಂದಿಸಲಾಗಿದೆ ಎಂದು ತೆಹ್ರಾನ್​ ಅಗ್ನಿಶಾಮಕ ಇಲಾಖೆಯ ವಕ್ತಾರ ಜಲಾಲ್​ ಮಲೆಕಿ ಮಾಹಿತಿ ನೀಡಿದ್ದಾರೆ.

ಕಳೆದ ವಾರ ತೆಹ್ರಾನ್​ ಸೂಕ್ಷ್ಮ ಮಿಲಿಟರಿ ಪ್ರದೇಶದ ಸಮೀಪ ಸ್ಫೋಟವೊಂದು ಸಂಭವಿಸಿತ್ತು. ಅನಿಲ ಸಂಗ್ರಹಣೆಯ ಪ್ರದೇಶದಲ್ಲಿ ಟ್ಯಾಂಕರ್​ನಿಂದ ಗ್ಯಾಸ್​ ಲೀಕ್​ ಆಗಿ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತ್ತು. ಆದರೆ, ಘಟನೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿರಲಿಲ್ಲ. (ಎಂ.ಎನ್)

Leave a Reply

comments

Related Articles

error: