
ಮೈಸೂರು
ಡಿಕೆಶಿವಕುಮಾರ್ ಕೆಪಿಸಿಸಿ ಪಟ್ಟಾಭಿಷೇಕ : ಮೈಸೂರಿನಲ್ಲಿಯೇ 2100 ಕಡೆ ನೇರ ಪ್ರಸಾರ
ಮೈಸೂರು,ಜು.2:- ಡಿಕೆಶಿವಕುಮಾರ್ ಕೆಪಿಸಿಸಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ನಡೆದಿದೆ. ಕೆಪಿಸಿಸಿ ಸಾರಥಿಯಾಗಿ ಇಂದು ಡಿಕೆಶಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ವರ್ಚುವಲ್ ಲೈವ್ ಮುಖಾಂತರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷರಾದ 114ದಿನಗಳ ಬಳಿಕ ಅಧಿಕಾರ ಸ್ವೀಕರಿಸುತ್ತಿದ್ದು, ರಾಜ್ಯಾದ್ಯಂತ ಕೈ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಮೈಸೂರು ಭಾಗದಲ್ಲೂ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಹುರುಪು ಮೂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ನಡುವೆ ಕಾರ್ಯಕ್ರಮ ನಡೆಯುತ್ತಿದ್ದು, ನಿಯಮ ಪಾಲನೆಗಾಗಿ ಕೆಪಿಸಿಸಿ ಕಚೇರಿಯಲ್ಲಿ 150 ಮಂದಿ ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನೆಚ್ಚಿನ ನಾಯಕ ಅಪೂರ್ವ ಕಾರ್ಯಕ್ರಮ ವೀಕ್ಷಣೆಗೆ ಕೊರೋನಾ ಅಡ್ಡಿ ಪಡಿಸಿದ್ದು, ಅಭಿಮಾನಿಗಳಿಗಾಗಿ ಪ್ರತಿಜಿಲ್ಲೆಯ ಪಂಚಾಯ್ತಿ, ಬ್ಲಾಕ್, ವಾರ್ಡ್ ಮಟ್ಟದಲ್ಲಿ ಸುಮಾರು 7,800 ಸ್ಥಳಗಳಲ್ಲಿ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಫೇಸ್ಬುಕ್ ಲೈವ್ ಮತ್ತು ಝೂಮ್ ಕಾನ್ಫರೆನ್ಸ್ ಮೂಲಕ 10 ಲಕ್ಷ ಮಂದಿ ಏಕಕಾಲದಲ್ಲಿ ಕಾರ್ಯಕ್ರಮ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಲೈವ್ ಗೆ ಸಿದ್ಧತೆ ನಡೆದಿದ್ದು, ಮೈಸೂರಿನಲ್ಲಿಯೇ 2100 ಕಡೆ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)