ಪ್ರಮುಖ ಸುದ್ದಿಮೈಸೂರು

ಕಾವೇರಿ ತವರಿನಲ್ಲೂ ಬರದ ಛಾಯೆ : ನೀರಿಗಾಗಿ ಹಾಹಾಕಾರ

ಮಡಿಕೇರಿ: ಕಾವೇರಿ ತವರಲ್ಲೂ ಬರದ ಛಾಯೆ ಕಾಣಿಸುತ್ತಿದೆ. ಕಾವೇರಿಯ ಒಡಲು ಬತ್ತುತ್ತಿದೆ. ಪ್ರಕೃತಿಯ ಮಡಿಲಲ್ಲಿ ನೀರಿಗಾಗಿ ಹಾಹಾಕಾರ ನಡೆದಿದೆ. ಬೇಸಿಗೆಗೂ ಮುನ್ನವೇ ಕಾವೇರಿಯ ತವರಿನ ಜನರು ತತ್ತರಿಸಿದ್ದಾರೆ. ದಕ್ಷಿಣ ಕೊಡಗಿನ ಜೀವ ನದಿಯಾದ ಲಕ್ಷಣ ತೀರ್ಥ ನದಿಯು ಬತ್ತಿಹೋಗಿದ್ದು ನೇರೆ ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ.

ಕಾವೇರಿ ತವರು ಪ್ರಾಕೃತಿಕ ಸೌಂದರ್ಯದ ನೆಲೆವೀಡು ಕೊಡಗು ಜಿಲ್ಲೆಯಲ್ಲಿ ಈಗ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನದಿ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಬತ್ತಿದ್ದು, ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ ಶೇ.30 ಭತ್ತ ಶೇ.50 ರಷ್ಟು ಕುಸಿತ ಕಂಡಿದ್ದು ಬೆಳೆಗಾರನ ಬದುಕು ದುಸ್ತರವಾಗಿದೆ.ಈ ಬಾರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಉದ್ಭವಿಸಿದ್ದು ಬೇಸಿಗೆಯಲ್ಲಿ ಮತ್ತಷ್ಟು ಭೀಕರವಾಗುವ ಸಾಧ್ಯತೆಗಳಿದೆ. ಕೊಡಗು ಜಿಲ್ಲೆ ಸತತವಾಗಿ ಎರಡು ವರ್ಷ ಬರಗಾಲವನ್ನು ಎದುರಿಸುತ್ತಿದೆ. ಜೀವನದಿ ಕಾವೇರಿ ಹರಿದು ಹೋಗುವ ವ್ಯಾಪ್ತಿಯಲ್ಲೂ ಬರದ ಛಾಯೆ ಕಂಡುಬಂದಿದೆ. ಈಗ ಲಕ್ಷ್ಮಣ ತೀರ್ಥ ನದಿಯು ಸಂಪೂರ್ಣವಾಗಿ ಬತ್ತಿಹೋಗಿದೆ.ಕೊಡಗಿನ ಬಾಳೆಲೆ ಕುಟ್ಟ, ಮಾಯಮುಡಿ ಹಾಗೂ ಪಕ್ಕದ ಜಿಲ್ಲೆಯಾದ ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಗಳ ರೈತರು ಈ ಲಕ್ಷ್ಮಣ ತೀರ್ಥ ನದಿಯ ನೀರನ್ನೇ ಅವಲಂಬಿಸಿದ್ದು ಭಾರೀ ಸಂಕಷ್ಟ ಎದುರಾಗಿದೆ. ಈ ಭಾಗದ ಜನ-ಜಾನುವಾರುಗಳು ಸಮಸ್ಯೆಯಿಂದ ನರಳುವಂತಾಗಿದೆ. ಹವಾಮಾನದ ವೈಪರೀತ್ಯದಿಂದಾಗಿ ಮಳೆಯೂ ಈ ವರ್ಷ ಕೈಕೊಟ್ಟಿದೆ. ಪರಿಣಾಮ ಲಕ್ಷ್ಮಣ ತೀರ್ಥ ನದಿ ಸೇರಿದಂತೆ, ಸಣ್ಣಪುಟ್ಟ ಹೊಳೆಗಳು, ಕೆರೆಗಳು ಈಗಾಗಲೇ ಬತ್ತಿ ಹೋಗಿದೆ.ಗ್ರಾಮೀಣ ಭಾಗದಲ್ಲೂ ಸೇರಿದಂತೆ ನಗರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ದುರಾದೃಷ್ಟಕರ ಸಂಗತಿ ಎಂದರೆ ಕಾಫಿ ಬೆಳೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಕಾಫಿ ಬೆಳೆಗಾರರು ಈಗ ಹೋಂಸ್ಟೇ ಆರಂಭಿಸಿದ್ದು, ಕೃಷಿಯನ್ನು ಮರೆತಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಂಸ್ಟೇ ಸಂಸ್ಕೃತಿಗೆ ಕೊಡಗಿನ ಬಹುತೇಕ ಬೆಳೆಗಾರರು ಮಾರು ಹೋಗಿದ್ದಾರೆ. ಇದರಿಂದ ಪರಿಸರ ನಾಶ, ಅನಗತ್ಯ ಯೋಜನೆಗಳು ಜಿಲ್ಲೆಯ ಪರಿಸರವನ್ನು ಹಾಳು ಮಾಡುತ್ತಿವೆ ಎಂಬ ಆರೋಪಗಳು  ಕೇಳಿ ಬರುತ್ತಿವೆ. ಹೈಟೆನ್ಷನ್ ಮಾರ್ಗ, ಅಕ್ರಮ ರೆಸಾರ್ಟ್ ತಲೆ ಎತ್ತಿರುವುದು, ಮರಳು ದಂಧೆ, ಮರ ಮಾಫಿಯಾ, ಅರಣ್ಯ ನಾಶದಿಂದ ಕೊಡಗಿನ ಪ್ರಾಕೃತಿಕ ಪರಿಸರವೇ ಬದಲಾಗಿದೆ. ಈ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಬರದ ತಾಂಡವ ಹೆಚ್ಚಾಗಿದೆ. ಇವುಗಳಿಗೆ ತುರ್ತಾಗಿ ಕಡಿವಾಣ ಹಾಕಬೇಕು ಎಂಬುದು ಕೊಡವ ರೈತ ಮುಖಂಡರ ಅಭಿಪ್ರಾಯ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: