ದೇಶಮನರಂಜನೆ

ನಟಿ ನವ್ಯಾ ಸ್ವಾಮಿ ಜೊತೆಗೆ ಅಭಿನಯಿಸಿದ್ದ ನಟ ರವಿಕೃಷ್ಣಗೆ ಕೊರೊನಾ ಪಾಸಿಟಿವ್

ಹೈದರಾಬಾದ್,ಜು.4-ಕಿರುತೆರೆ ನಟಿ ನವ್ಯಾ ಸ್ವಾಮಿ ಅವರ ಬಳಿಕ ಇದೀಗ ಅವರೊಂದಿಗೆ ನಟಿಸುತ್ತಿದ್ದ ನಟ ರವಿಕೃಷ್ಣ ಅವರಿಗೂ ಕೊರೊನಾ ಸೋಂಕು ತಗುಲಿದೆ.

ಮೈಸೂರು ಮೂಲದ ನಟಿ ನವ್ಯಾ ಸ್ವಾಮಿ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನವ್ಯಾ ಸ್ವಾಮಿ ತೆಲುಗಿನ ‘ಆಮೆ ಕಥಾ’ ಧಾರಾವಾಹಿಯ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಈ ನಡುವೆ ಅವರಿಗೆ ಸೋಂಕು ತಗುಲಿತ್ತು. ಇದೀಗ ಅವರ ಸಹ ನಟ ರವಿಕೃಷ್ಣ ಅವರಿಗೂ ಸೋಂಕು ತಗುಲಿದೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸದ್ಯ ರವಿಕೃಷ್ಣ ಅವರು ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನನಗೆ ಕೊರೊನಾ ಪಾಸಿಟಿವ್‌ ಎಂಬ ವರದಿ ನಿನ್ನೆ ರಾತ್ರಿಯಷ್ಟೇ ಸಿಕ್ಕಿತು. ಅದಕ್ಕೂ ಮೊದಲೇ, ಅಂದರೆ ಯಾವಾಗ ನವ್ಯಾ ಸ್ವಾಮಿಗೆ ಕೊರೊನಾ ಬಂದಿದೆ ಎಂಬುದು ಗೊತ್ತಾಯಿತೋ ಆಗಿನಿಂದಲೇ ನಾನು ಸೆಲ್ಫ್‌ ಐಸೋಲೇಟ್ ಆಗಿದ್ದೇನೆ. ನನಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಕೆಲವು ಔಷಧಿಗಳನ್ನು ವೈದ್ಯರು ಸೂಚಿಸಿದ್ದಾರೆ. ಅದನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ನನಗೆ ಸೋಂಕು ತಗುಲಿದೆ ಎಂದು ಗೊತ್ತಾದಾಗ ಏನು ಮಾಡಬೇಕು ಎಂಬುದೇ ತೋಚಲಿಲ್ಲ. ಆದರೆ ನವ್ಯಾ ಅವರನ್ನು ನೋಡಿದ ಬಳಿಕ ನಾನು ಸ್ಟ್ರಾಂಗ್‌ ಆಗಿದ್ದೇನೆ. ಕೊರೊನಾ ಪರೀಕ್ಷೆ ವರದಿ ನೋಡಿದಾಗ ನವ್ಯಾ ಕೂಡ ಸೆಟ್‌ನಲ್ಲಿ ಕುಸಿದು ಹೋದರು. ಅದಕ್ಕೂ ಕೆಲವೇ ನಿಮಿಷ ಮುಂಚೆ ಅವರನ್ನು ತಬ್ಬಿಕೊಂಡವರೆಲ್ಲ, ನಂತರ ದೂರ ಹೋಗಲು ಆರಂಭಿಸಿದರು. ಇದು ನಿಜಕ್ಕೂ ಶಾಕಿಂಗ್‌ ಎನಿಸಿತು. ಇದರಿಂದ ನವ್ಯಾಗೂ ಸಖತ್‌ ಬೇಸರ ಆಯಿತು. ನಾನು ಮತ್ತು ನಮ್ಮ ನಿರ್ಮಾಪಕರು ನವ್ಯಾ ಜೊತೆಯಲ್ಲೇ ಇರಲು ಪ್ರಯತ್ನಿಸಿದೆವು. ಯಾಕೆಂದರೆ ಈ ಸಮಯದಲ್ಲಿ ನಿಜಕ್ಕೂ ನಾವು ಅವರ ಬೆಂಬಲಕ್ಕೆ ನಿಲ್ಲುವ ಅವಶ್ಯಕತೆ ಇರುತ್ತದೆ.

ತಮಗೆ ಕೊರೊನಾ ಪಾಸಿಟಿವ್‌ ಆಗಿರುವ ವಿಷಯವನ್ನು ಕುಟುಂಬದವರ ಜೊತೆ ಹಂಚಿಕೊಳ್ಳಲು ರವಿಕೃಷ್ಣ ಹಿಂದೇಟು ಹಾಕಿದ್ದಾರೆ. ಹಾಗಂತ ಇದನ್ನು ಮುಚ್ಚಿಡಬೇಕು ಎಂಬ ಉದ್ದೇಶ ಅವರದ್ದಲ್ಲ. ಹಾಗೆ ಮಾಡುವುದಕ್ಕೂ ಅವರಿಗೆ ಒಂದು ಕಾರಣ ಇದೆ. ನನ್ನ ಕುಟುಂಬದವರಿಗೆ ಇನ್ನೂ ನಾನು ವಿಷಯ ಹೇಳಿಲ್ಲ. ಅವರಿಗೆ ಈ ಸುದ್ದಿ ಗೊತ್ತಾಗುವವರೆಗಾದರೂ ಅವರು ಶಾಂತವಾಗಿರಲಿ. ಆದರೆ ನಟಿ ಶಿವ ಜ್ಯೋತಿ ರಾತ್ರಿ ಪೂರ್ತಿ ಅಳುತ್ತಲೇ ಇದ್ದರು. ಅವರ ಕುಟುಂಬದವರು ಕೂಡ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ನನ್ನಿಂದ ಬೇರೆ ಯಾರಿಗೂ ಹೆಚ್ಚು ತೊಂದರೆ ಆಗಬಾರದು. ಹಾಗಾಗಿ ಹೋಟೆಲ್‌ಗೆ ತೆರಳಿ, ಪ್ರತ್ಯೇಕ ಕೊಠಡಿಯಲ್ಲಿ ಇರಲು ಬಯಸಿದೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಹೊಟ್ಟೆಪಾಡಿಗೆ ನಟನೆಯನ್ನೇ ನಂಬಿಕೊಂಡು ಇದ್ದವರು. ಕೊರೊನಾ ಹಾವಳಿ ಇದ್ದಾಗಲೂ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ನಟನೆಯಿಂದ ಬರುವ ಸಂಭಾವನೆಯನ್ನೇ ಅವರವರ ಕುಟುಂಬ ನಂಬಿಕೊಂಡಿದೆ. ಒಂದು ವೇಳೆ ಯಾರಾದರೂ ನಟ ಶೂಟಿಂಗ್‌ಗೆ ಬರಲು ಒಪ್ಪಿಕೊಳ್ಳದಿದ್ದರೆ ಅವನನ್ನು ತಪ್ಪಾಗಿ ಭಾವಿಸುವ ಸಾಧ್ಯತೆ ಇರುತ್ತದೆ. ಇವನಿಗೆ ಅಹಂಕಾರ ಎಂದುಕೊಳ್ಳುತ್ತಾರೆ. ನಮ್ಮ ಬದಲಿಗೆ ಬೇರೆ ಯಾವುದಾದರೂ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಆರೋಗ್ಯ ಮತ್ತು ಕೆಲಸದ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಕಠಿಣ ಸಂದರ್ಭ ಒದಗಿಬಂತು. ಹಿರಿಯರಿಗೆ ರಿಸ್ಕ್‌ ಜಾಸ್ತಿ. ಹಾಗಾಗಿ ನಾನು ಮನೆಗೆ ಕೂಡ ಹೋಗಲಿಲ್ಲ ಎಂದಿದ್ದಾರೆ.

ಕೊರೊನಾ ಸೋಂಕಿತರನ್ನು ಜನರು ನೋಡುವ ದೃಷ್ಟಿಕೋನ ತುಂಬ ವಿಚಿತ್ರವಾಗಿದೆ. ಸಮಾಜದಲ್ಲಿ ಅನಗತ್ಯ ಭಯದ ವಾತಾವರಣ ಕೂಡ ಇದೆ. ಈ ಬಗ್ಗೆ ಮಾತನಾಡಿರುವ ಅವರು, ಯಾರೂ ಆತಂಕಕ್ಕೆ ಒಳಗಾಗಬೇಡಿ. ಮಾನಸಿಕವಾಗಿ ನಾವು ಗಟ್ಟಿಯಾಗಿ ಇರುವವರೆಗೆ ಈ ರೋಗದ ವಿರುದ್ಧ ಹೋರಾಡಬಹುದು. ಕೊರೊನಾ ಪಾಸಿಟವ್‌ ವರದಿ ಬಂದಿರುವ ಯಾವುದೇ ವ್ಯಕ್ತಿಯನ್ನೂ ಭೇದ-ಭಾವದಿಂದ ನೋಡಬೇಡಿ.ನೈತಿಕವಾಗಿ ಅವರಿಗೆ ಬೆಂಬಲ ನೀಡುವುದನ್ನು ಹೊರತುಪಡಿಸಿ ನೀವು ಅವರಿಗೆ ಬೇರೆ ಏನನ್ನೂ ಮಾಡುವುದು ಬೇಕಾಗಿಲ್ಲ. ಅದೂ ಸಾಧ್ಯವಿಲ್ಲ ಎಂದರೆ ಸುಮ್ಮನೆ ಇದ್ದು ಬಿಡಿ. ಆದರೆ ನೆಗೆಟಿವ್‌ ಆಲೋಚನೆ ಮತ್ತು ದ್ವೇಷವನ್ನು ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನವ್ಯಾ ಸ್ವಾಮಿ ಅವರಿಗೆ ಕೊರೊನಾ ವೈರಸ್‌ ಪಾಸಿಟಿವ್ ಬರುತ್ತಿದ್ದಂತೆ ‘ಆಮೆ ಕಥಾ’ ಧಾರಾವಾಹಿಯ ತಂಡ ಚಿತ್ರೀಕರಣ ಸ್ಥಗಿತಗೊಳಿಸಿ ಐಸೋಲೇಷನ್‌ನಲ್ಲಿ ಇದೆ. (ಎಂ.ಎನ್)

Leave a Reply

comments

Related Articles

error: